ಬೆಂಗಳೂರು: ನಿನ್ನೆಯಷ್ಟೇ ನಾವು ಒಂದು ವೋಟು ಧ್ರುವ ನಾರಾಯಣ ಅಂತ ಮಾತನಾಡಿಕೊಂಡ್ವಿ.. ಇವತ್ತು ಅವರು ಶಾಶ್ವತವಾಗಿ ನಮ್ಮ ನಡುವೆ ಇಲ್ಲ ಎಂದರೆ ನಂಬುವುದು ಹೇಗೆ?- ಹೀಗೆ ಹೇಳುತ್ತಲೇ ಕಣ್ಣೀರಾದರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ ಅವರ ಸಾವಿನಿಂದ ತೀವ್ರ ನೋವು ಅನುಭವಿಸಿದ ಡಿ.ಕೆ. ಶಿವಕುಮಾರ್, ಸಾವಿಗೂ ಹುಟ್ಟಿಗೂ ನಡುವೆ ಒಂದು ಪುಟ್ಟ ಜೀವನವನ್ನು ಭಗವಂತ ಇಟ್ಟಿದ್ದ. ಅದು ಇಷ್ಟು ಬೇಗ ಮುಗಿದು ಹೋಗುತ್ತದೆ ಅಂದುಕೊಂಡಿರಲಿಲ್ಲ ಎಂದು ಬೇಸರಿಸಿದರು.
ನನಗೂ ಸಮಾಧಾನ ಹೇಳುತ್ತಿದ್ದರು
ʻʻಇಡೀ ನಮ್ಮ ಕಾಂಗ್ರೆಸ್ ಪರಿವಾರದಲ್ಲಿ ಯಾವೆಲ್ಲ ಜವಬ್ದಾರಿ ತೆಗೆದುಕೊಂಡಿದ್ದರೋ ಅವರ ನಡುವೆ ಅತಿ ಹೆಚ್ಚು ಸಂಭಾವಿತ ವ್ಯಕ್ತಿ ಧ್ರುವನಾರಾಯಣ. ಯಾರನ್ನು ಕೂಡಾ ನೋಯಿಸಬಾರದು ಎಂಬ ವಿಶೇಷ ಗುಣ ಹೊಂದಿದ್ದ ನಾಯಕ. ಎಲ್ಲಾ ಸಮಾಜದವರು, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ವ್ಯಕ್ತಿ ಅವರುʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನನ್ನ ಕುಟುಂಬ ಮತ್ತು ರಾಜ್ಯದ ಎಲ್ಲ ಕಾರ್ಯಕರ್ತರಿಗೆ ಅವರು ಆಸ್ತಿಯಾಗಿದ್ದರು. ನನಗೂ ಕೂಡಾ ಹತ್ತಾರು ಬಾರಿ ಸಮಾಧಾನ ಹೇಳಿದ್ದರು. ಕಾರ್ಯಾಧ್ಯಕ್ಷರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದರು. ಇಂದು ಅವರು ನಮ್ಮ ಜತೆಯಲ್ಲಿಲ್ಲ. ಆದರೆ ಅವರ ಸೇವೆ ಅವರ ಕ್ಷೇತ್ರದಲ್ಲಿ ಸಾಕ್ಷಿಯಾಗಿ ಉಳಿದುಕೊಂಡಿದೆ ಎಂದು ಕಂಬನಿಗರೆದಿದ್ದಾರೆ ಡಿ.ಕೆ. ಶಿವಕುಮಾರ್.
ʻʻನಾನು ಮಲಗಿದ್ದೆ, ನಮ್ಮ ಮನೆಗೆ ಫೋನ್ ಮಾಡಿ ತಿಳಿಸಿದ್ದಾರೆ. ರಕ್ತ ವಾಂತಿ ಆಗುತ್ತಿದೆ. ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದಾರೆ ಅಂದರು. ಎಐಸಿಸಿ ಅಧ್ಯಕ್ಷರು, ಸೋನಿಯಾ ಗಾಂಧಿಯವರು ಎಲ್ಲ ಕರೆ ಮಾಡಿದರು. ಯಾರಿಗೂ ಈ ಘಟನೆಯನ್ನು ನಂಬೋದಕ್ಕೆ ಆಗ್ತಿಲ್ಲ. ಅವರು ಆ ಮಟ್ಟಿಗೆ ಎಲ್ಲರ ಹೃದಯವನ್ನು ಗೆದ್ದಿದ್ದರುʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಧ್ರುವ ನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಸಾವಿನಿಂದ ಆಘಾತವಾಗಿದೆ ಎಂದ ಸಿದ್ದರಾಮಯ್ಯ: ನೋವಿನ ಕಂಬನಿ
ʼʼನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಆರ್ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆʼʼ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : R Dhruvanarayana : ಸಭ್ಯತೆಯ ಸವ್ಯಸಾಚಿ, ಶುದ್ಧ- ಮೌಲ್ಯಾಧರಿತ ರಾಜಕಾರಣದ ʻಧ್ರುವʼ ನಕ್ಷತ್ರ ಕಣ್ಮರೆ