ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ (R Dhruvanarayana) ಅವರ ಅಕಾಲಿಕ ನಿಧನದ ಬೆನ್ನಿಗೇ ಟಿಕೆಟ್ ಪಾಲಿಟಿಕ್ಸ್ ಎದ್ದು ನಿಂತಿದೆ. ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅಲ್ಲಿ ಇನ್ನೊಬ್ಬ ಆಕಾಂಕ್ಷಿಯಾದ ಎಚ್.ಸಿ. ಮಹದೇವಪ್ಪ ಅವರೂ ಇದ್ದರು. ತನಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಧ್ರುವನಾರಾಯಣ ಅವರಿಗೆ ಇತ್ತು ಎಂದು ಹೇಳಲಾಗಿದೆ.
ಈ ನಡುವೆ, ಅವರ ಸಾವಿನ ದಿನದಂದೇ ಅಭಿಮಾನಿಗಳು ಒಂದು ಪ್ರಬಲ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ನಂಜನಗೂಡು ಕ್ಷೇತ್ರದ ಟಿಕೆಟನ್ನು ಧ್ರುವನಾರಾಯಣ್ ಪುತ್ರ ದರ್ಶನ್ ಅವರಿಗೇ ನೀಡಬೇಕು ಮತ್ತು ಶನಿವಾರವೇ ಟಿಕೆಟ್ ಘೋಷಣೆ ಮಾಡುವಂತೆ ಅಭಿಮಾನಿಗಳು ಪಟ್ಟು ಹಿಡಿದಿದೆ.
ಧ್ರುವ ನಾರಾಯಣ್ ಅವರ ಅಂತಿಮ ದರ್ಶನಕ್ಕಾಗಿ ಬಂದಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ನಾಯಕ ಸಿದ್ದರಾಮಯ್ಯ ಅವರ ಮುಂದೆಯೇ ಧ್ರುವನಾರಾಯಣ್ ಅಭಿಮಾನಿಗಳು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.
ಕಾಂಗ್ರೆಸ್ ನಾಯಕರು ಧ್ರುವ ನಾರಾಯಣ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳು ʻʻದರ್ಶನ್ ದರ್ಶನ್ʼʼ ಎಂದು ಕೂಗಿದರು. ಧ್ರುವ ನಾರಾಯಣ್ ನಿವಾಸದ ಮುಂದೆಯೇ ಟಿಕೆಟ್ ಘೋಷಣೆ ಮಾಡಿ ಎಂದು ಆಗ್ರಹಿಸಿದರು.
ಹಿರಿಯ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗಲೂ ಟಿಕೆಟ್ ಘೋಷಣೆ ಮಾಡಿ ಎಂದು ಒತ್ತಾಯಿಸಿದರು. ದರ್ಶನ್ ಅವರು ಈ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಲು ತಂದೆಯ ಪಾರ್ಥಿವ ಶರೀರದ ಮುಂದೆ ಕಣ್ಣೀರು ಹಾಕುತ್ತಿದ್ದರು.
ದರ್ಶನ್ ಅವರು ಚುನಾವಣಾ ಸ್ಪರ್ಧೆಗೆ ಸಿದ್ಧರಿದ್ದಾರೆಯೇ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಅಭಿಮಾನಿಗಳು ಮಾತ್ರ ಕೊಡಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.
ನಿಜವೆಂದರೆ, ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಎಚ್.ಸಿ. ಮಹದೇವಪ್ಪ ಅವರು ಕೂಡಾ ಆಕಾಂಕ್ಷಿಗಳಾಗಿದ್ದರಿಂದ ಸ್ಪರ್ಧೆ ಏರ್ಪಟ್ಟಿತ್ತು. ರಾಜ್ಯದ ಸ್ಕ್ರೀನಿಂಗ್ ಕಮಿಟಿ ಎರಡೂ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದೆ.
ಈಗ ಹೈಕಮಾಂಡ್ ಎಚ್.ಸಿ. ಮಹದೇವಪ್ಪ ಅವರಿಗೆ ಟಿಕೆಟ್ ಕೊಡುತ್ತದಾ ಅಥವಾ ಅನುಕಂಪದ ಲಾಭ ಎತ್ತುವ ದೃಷ್ಟಿಯಿಂದ ಧ್ರುವನಾರಾಯಣ್ ಅವರ ಪುತ್ರ ದರ್ಶನ್‌ಗೆ ಕೊಡುತ್ತದಾ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : R Dhruvanarayana : ನಂಜನಗೂಡಿನಿಂದ ಸ್ಪರ್ಧೆ ಬಯಸಿದ್ದ ಧ್ರುವನಾರಾಯಣ್; ಟಿಕೆಟ್ ಕೈ ತಪ್ಪುವ ಆತಂಕದಲ್ಲಿದ್ದರೇ?