ಬೆಂಗಳೂರು: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ (R Dhruvanarayana) ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಕ್ಕೆ ಪಕ್ಷಾತೀತವಾಗಿ ಕಂಬನಿ ವ್ಯಕ್ತವಾಗಿದೆ. ಸಜ್ಜನ ರಾಜಕಾರಣಿಯೊಬ್ಬರನ್ನು ರಾಜ್ಯ ಕಳೆದುಕೊಂಡಿದೆ ಎಂದು ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಶ್ರದ್ಧಾಂಜಲಿ ಸಭೆ ನಡೆಸಿ ಕೋರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆದರೆ, ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆದಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಹಾಗೂ ರಾಜಕಾರಣದ ಪರಿವಾರಕ್ಕೆ ಧ್ರುವನಾರಾಯಣ ಅವರ ಅಗಲಿಕೆ ದೊಡ್ಡ ಆಘಾತ ತಂದಿದೆ. ಭಗವಂತ ಯಾಕೆ ಇಷ್ಟು ಕ್ರೂರಿಯಾಗಿದ್ದಾನೆ ಎಂದು ತಿಳಿಯುತ್ತಿಲ್ಲ. ಅವರು ಆಜಾತ ಶತ್ರು. ತಮಗೆ ಕೊಟ್ಟ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿಭಾಯಿಸಿ ಪಕ್ಷಕ್ಕೆ ನಿಷ್ಠೆ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿ ಇದ್ದರು. ನಮ್ಮ ಕಾರ್ಯಾಧ್ಯಕ್ಷರಾಗಿ ಕೋವಿಡ್ ಸಮಯದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ, ಅವರ ಬದ್ಧತೆ ಅವಿಸ್ಮರಣೀಯ ಎಂದು ಕಂಬನಿ ಮಿಡಿದರು.
ಇದನ್ನೂ ಓದಿ: R Dhruvanarayana : ನಂಜನಗೂಡಿನಿಂದ ಸ್ಪರ್ಧೆ ಬಯಸಿದ್ದ ಧ್ರುವನಾರಾಯಣ್; ಟಿಕೆಟ್ ಕೈ ತಪ್ಪುವ ಆತಂಕದಲ್ಲಿದ್ದರೇ?
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಸಂಸದ ಡಿ.ಕೆ. ಸುರೇಶ್, ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ದಾವಣಗೆರೆಯಲ್ಲಿ ಸಿದ್ದರಾಮಯ್ಯರಿಂದ ಶ್ರದ್ಧಾಂಜಲಿ
ದಾವಣಗೆರೆ ಬಾಪೂಜಿ ಗೆಸ್ಟ್‌ಹೌಸ್‌ನಲ್ಲಿ ಧ್ರುವನಾರಾಯಣ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿದ್ದರಾಮಯ್ಯ ಮತ್ತು ನಾಯಕರಿಂದ ಹೂವು ಅರ್ಪಿಸಿ ನಮಿಸಲಾಯಿತು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಧ್ರುವನಾರಾಯಣ ಅವರಿಗೆ 61 ವರ್ಷವಷ್ಟೇ ಆಗಿತ್ತು. ಅವರ ಸಾವು ನನಗಷ್ಟೇ ಅಲ್ಲ, ಕಾರ್ಯಕರ್ತರಿಗೆ, ನಾಯಕರಿಗೆ ತುಂಬಲಾರದ ನಷ್ಟ. ಕಾಂಗ್ರೆಸ್‌ನಲ್ಲಿ ಎನ್‌ಎಸ್‌ಯುಐನಿಂದ ವಿಧಾನಸಭೆ, ಸಂಸತ್ತಿಗೆ ಹೋದವರು.
ಜನಪರ ಕಾಳಜಿ ಇದ್ದ ವ್ಯಕ್ತಿ ಇವರಾಗಿದ್ದು, ಸಂಸತ್ತಿನಲ್ಲಿ ಕೆಲವೇ ಲೋಕಸಭಾ ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದರು. ನಂ.1 ಲೋಕಸಭಾ ಸದಸ್ಯರಾಗಿದ್ದವರು. ಮೈಸೂರು ಭಾಗದಲ್ಲಿ ಪ್ರಮುಖ ದಲಿತ ನಾಯಕರಾಗಿದ್ದ ಇವರನ್ನು ಕಳೆದುಕೊಂಡಿರುವುದು ಕಾಂಗ್ರೆಸ್‌ಗೆ ಅಪಾರ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ ಕಿಮ್ಮನೆ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ
ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ಧ್ರುವನಾರಾಯಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ್ ಗೌಡ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಅಸದಿ, ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
ವಿಜಯನಗರದ ಹೊಸಕೋಟೆಯಲ್ಲಿ ಸಂತಾಪ
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಕಾಂಗ್ರೆಸ್ ಮುಖಂಡರಾದ ಇಮಾಮ್ ನಿಯಾಜಿ, ರಾಜಶೇಖರ ಹಿಟ್ನಾಳ್, ಸೋಮಶೇಖರ್ ಬಣ್ಣದ ಮನೆ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು.
ಇದನ್ನೂ ಓದಿ: R Dhruvanarayana : ಧ್ರುವನಾರಾಯಣ ಸರ್, ನೀವು ಮಾದರಿ ರಾಜಕಾರಣಕ್ಕೊಂದು ಅದ್ಭುತ ಪಾಠ, ಬದುಕಿನ ಮರೆಯಲಾಗದ ಅಧ್ಯಾಯ
ರಾಮನಗರದಲ್ಲಿ ಶ್ರದ್ಧಾಂಜಲಿ
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ, ಮುಖಂಡರಾದ ಇಕ್ಬಾಲ್ ಹುಸೇನ್, ಶೇಷಾದ್ರಿ, ಗಂಗಾಧರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.