ಹಾವೇರಿ: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಬರುವ ಚುನಾವಣೆಯಲ್ಲಿ (Karnataka Election 2023) ನನ್ನ ಸ್ಪರ್ಧೆ ಖಚಿತ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಟಿಕೆಟ್ ಕೊಡದಿದ್ದರೆ ಜನರ ಟಿಕೆಟ್ ಅಂತೂ ನನಗೆ ಇದ್ದೇ ಎಂದು ಎಂದು ಹೇಳಿರುವ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ (R Shankar), ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುವುದಾಗಿ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ, ಭಾನುವಾರ (ಮಾ. 19) ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟವನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ್, ಇಂದು ನನ್ನ ಮೊಮ್ಮಗ ರುದ್ದವ್ ಹಾಗೂ ನನ್ನ ಹುಟ್ಟುಹಬ್ಬವಿದ್ದ ಕಾರಣ ಜನರಿಗೆ ಊಟ ಕೊಡಬೇಕು ಎಂದು ಈ ಔತಣಕೂಟವನ್ನು ಏರ್ಪಡಿಸಿದ್ದೇನೆ. ಬೆಂಗಳೂರಿನಲ್ಲಿ ಮಗನ ಮದುವೆ ಮಾಡಿದ್ದೆ. ಆದರೆ, ಇಲ್ಲಿ ಏನೂ ಮಾಡಲು ಆಗಿರಲಿಲ್ಲ. ರಾಣೆಬೆನ್ನೂರು ತಾಲೂಕಿನ ಋಣ ನನ್ನ ಮೇಲಿದೆ. ನನ್ನನ್ನು ಪಕ್ಷೇತರವಾಗಿ ಜನರು ಆಯ್ಕೆ ಮಾಡಿದ್ದರು. ಅವರಿಗೆ ಧನ್ಯವಾದ ಹೇಳಲು ಆಗಿರಲಿಲ್ಲ, ಎಲ್ಲವನ್ನೂ ಒಟ್ಟಿಗೆ ಕೊಟ್ಟಿದ್ದೇನೆ. ಅವರ ಅಭಿಮಾನಕ್ಕೆ ನಾನು ಚಿರರುಣಿ. ಮುಂದೆ ನಾನು ಗೆಲ್ಲುವುದು ಗ್ಯಾರಂಟಿಯಾಗಿದ್ದು, ಗೆದ್ದ ಮೇಲೆ 501 ಮದುವೆ, ಇದಕ್ಕಿಂತ ಎರಡು ಪಟ್ಟು ದೊಡ್ಡ ಊಟದ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Shivaji Statue: ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಶುದ್ಧೀಕರಣ ಮಾಡಿದ ಎಂಇಎಸ್ ಮುಖಂಡರು
ಇದೊಂದು ಔತಣಕೂಟವಾಗಿದೆ. ಚುನಾವಣೆ ಬಂದಾಗ ರಾಜಕೀಯ ಮಾತನಾಡುತ್ತೇನೆ. ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇನೆ. ಬಿಜೆಪಿ ಟಿಕೆಟ್ ಕೊಟ್ಟರೂ, ಕೊಡದೇ ಇದ್ದರೂ ನಾನು ಸ್ಪರ್ಧೆ ಮಾಡುತ್ತೇನೆ. ಯಾವ ಟಿಕೆಟ್ ಇದೆಯೋ ಇಲ್ಲವೋ ಗೊತ್ತಿಲ್ಲ. ಜನರ ಟಿಕೆಟ್ ನನ್ನ ಬಳಿ ಇದೆ. ನೂರಕ್ಕೆ ಲಕ್ಷ ಪರ್ಸೆಂಟ್ ನಾನು ಚುನಾವಣೆಗೆ ನಿಲ್ಲೋದು ಗ್ಯಾರಂಟಿ ಎಂದು ಹೇಳಿದರು.
ಕುರಿ, ಕೋಳಿ, ಮೊಟ್ಟೆಯ ಭರ್ಜರಿ ಔತಣಕೂಟ
ರಾಣೇಬೆನ್ನೂಋು ನಗರದ ಉರ್ದು ಶಾಲೆ ಆವರಣದಲ್ಲಿ ಮತದಾರರಿಗೆ ಕುರಿ, ಕೋಳಿ, ಮೊಟ್ಟೆಯ ಭರ್ಜರಿ ಔತಣಕೂಟವನ್ನು ಆರ್. ಶಂಕರ್ ಏರ್ಪಡಿಸಿದ್ದರು. ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಔತಣಕೂಟ ನಡೆಸಿದ್ದು, ಈ ಮೂಲಕ ಮತದಾರರ ಮನ ಗೆಲ್ಲಲು ಶಂಕರ್ ರಣತಂತ್ರ ರೂಪಿಸುತ್ತಿದ್ದಾರೆ.
ಈಗಾಗಲೇ ಸ್ಕೂಲ್ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಬ್ಯಾಗ್, ಹೆಣ್ಣುಮಕ್ಕಳಿಗೆ ಸೀರೆ, ಕುಕ್ಕರ್ ಅನ್ನು ಹಂಚಿಕೆ ಮಾಡಿದ್ದಾರೆ. ಮೊನ್ನೆಯಷ್ಟೆ ಆರ್. ಶಂಕರ್ ನಿವಾಸದ ಮೇಲೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ಬೆನ್ನಲ್ಲೇ ಮತದಾರರಿಗೆ ಮತ್ತೆ ಭರ್ಜರಿ ಔತಣಕೂಟವನ್ನು ಏರ್ಪಡಿಸಲಾಗಿದೆ.
ಇದನ್ನೂ ಓದಿ: Siddaramaiah: ಕೋಲಾರದಿಂದ ಸ್ಪರ್ಧಿಸದಂತೆ ಹೈಕಮಾಂಡ್ ಹೇಳಿದೆ ಎಂದ ಡಾ. ಯತೀಂದ್ರ: ಆದರೆ ಸುರ್ಜೆವಾಲ ಹೇಳಿದ್ದೇ ಬೇರೆ
ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
ಜನರನ್ನು ಸೆಳೆಯಲು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯನ್ನು ಮಾಡಲಾಗಿದ್ದು, ಸಂಗೀತ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳೆಯರಿಗೆ ಹಸಿರು ಬಳೆ, ಅರಿಶಿಣ, ಕುಂಕುಮಗಳನ್ನು ನೀಡಿ ಕಳುಹಿಸಲಾಗಿದೆ. ಇದೇ ವೇಳೆ ಆರ್ ಶಂಕರ್ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.