ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಸಂವಾದ ನಡೆಸಿದ್ದಾರೆ. ಇದೇ ವೇಳೆ ಅವರು ಮೀನುಗಾರರಿಗೆ ಹಲವು ಭರವಸೆ ನೀಡಿದ್ದಾರೆ. ಹಾಗೆಯೇ, ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಯೊಂದನ್ನು ಕೇಳಿದರು. ಮಕ್ಕಳು ಹಾಗೂ ಮೀಸಲಾತಿಗೆ ಏನು ಮಾಡುತ್ತೀರಿ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು (Karnataka Election 2023) ಶೇ.70ಕ್ಕೆ ಏರಿಕೆ ಮಾಡುತ್ತೇವೆ” ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಅಂಜಲ್ ಮೀನೊಂದನ್ನು ಉಡುಗೊರೆ ನೀಡಿದರು. ಉಡುಗೊರೆ ಸ್ವೀಕರಿಸಿದ ಬಳಿಕ ರಾಹುಲ್ ಗಾಂಧಿ ಅವರು ಪಕ್ಕದಲ್ಲೇ ಇರುವ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿದರು. ಆದರೆ, ಅವರು ದೇವಸ್ಥಾನದ ಒಳಗೆ ಪ್ರವೇಶಿಸಲಿಲ್ಲ. ಒಳಗೆ ಬನ್ನಿ ಎಂದು ಅರ್ಚಕರು ಕರೆದರೂ, “ನಾನು ಈಗಷ್ಟೇ ಮೀನನ್ನು ಮುಟ್ಟಿದ್ದೇನೆ. ಹಾಗಾಗಿ, ಒಳಗೆ ಬರುವುದಿಲ್ಲ” ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ದೇವಸ್ಥಾನದ ಪ್ರಾಂಗಣ ತಲುಪುತ್ತಲೇ ಒಳಗೆ ಬನ್ನಿ ಎಂದು ಅರ್ಚಕರು ಕರೆದರು. ಆಗ, ರಾಹುಲ್ ಗಾಂಧಿ ಅವರು ಇಲ್ಲ ಮೀನು ಹಿಡಿದಿದ್ದೇನೆ ಎಂದು ಅವರಿಗೆ ಮನವರಿಕೆ ಮಾಡಿದರು. ಬಳಿಕ ದೇವಾಲಯದ ಪ್ರಾಂಗಣದಲ್ಲಿಯೇ ರಾಹುಲ್ ಗಾಂಧಿ ಅವರಿಗೆ ಶಾಲು ಹೊದಿಸಿ ಅರ್ಚಕರು ಗೌರವ ಸಲ್ಲಿಸಿದರು. ಕಾಂಗ್ರೆಸ್ ನಾಯಕನ ಜತೆ ಪಕ್ಷದ ಹಲವು ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.
ರಾಹುಲ್ ಗಾಂಧಿಗೆ ಮೀನು ಉಡುಗೊರೆ ನೀಡಿದ ಮಹಿಳೆ
ದೇವಸ್ಥಾನಕ್ಕೂ ಮುನ್ನ ಮೀನುಗಾರರ ಜತೆ ಸಂವಾದದ ವೇಳೆ ಮಾತನಾಡಿದ ರಾಹುಲ್ ಗಾಂಧಿ, “ನಾನೂ ನಿಮ್ಮ ಕುಟುಂಬದ ಸದಸ್ಯ. ನಿಮ್ಮ ಜತೆ ನೇರ ಸಂವಾದ ಯಾವಾಗಲೂ ಇರುತ್ತದೆ. ಮೀನುಗಾರರ ಹಿತ ಕಾಪಾಡುವುದರಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಶಕ್ತಿಯುತ ಜನರಲ್ಲಿ ಶೇ.7ರಷ್ಟು ಜನ ಮಾತ್ರ ದಲಿತರು, ಆದಿವಾಸಿಗಳು ಇದ್ದಾರೆ. ಜಾತಿಗಣತಿ ಮಾಡಿ ಎಂದು ನಾನು ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಇದು ಕೇಂದ್ರ ಸರ್ಕಾರದ ಕೆಲಸ. ಆದರೆ, ಕೇಂದ್ರ ಸರ್ಕಾರವು ಇದುವರೆಗೆ ಜಾತಿ ಗಣತಿಯ ವಿವರ ಬಹಿರಂಗ ಮಾಡಿಲ್ಲ” ಎಂದರು.
ಇದನ್ನೂ ಓದಿ: ಚುನಾವಣೆ ವೇಳೆಯೇ ಕಾಂಗ್ರೆಸ್‌ಗೇಕೆ ಲಿಂಗಾಯತರ ಮೇಲೆ ಪ್ರೀತಿ; ರಾಹುಲ್ ಗಾಂಧಿಗೆ ವಿಜಯೇಂದ್ರ ಪ್ರಶ್ನೆ