Site icon Vistara News

ರಾಹುಲ್‌ಗೂ ತಟ್ಟಿದ ಜನಸ್ತೋಮದ ಬಿಸಿ, ಹೆದರಿ ಪ್ರಯಾಣದ ಮಾರ್ಗವನ್ನೇ ಬದಲಿಸಿದ ಎಸ್‌ಪಿಜಿ!

traffic

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕರೆತರಲು ಎಸ್‌ಪಿಜಿ ಭಾರಿ ಹರಸಾಹಸ ನಡೆಸಬೇಕಾಗಿ ಬಂದಿದೆ. ಮಧ್ಯಾಹ್ನ 12.30ಕ್ಕೆ ವೇದಿಕೆ ಏರಬೇಕಾಗಿದ್ದ ರಾಹುಲ್‌ ಅವರು ಕೊನೆಗೆ ೨.30ಕ್ಕೆ ವೇದಿಕೆ ಏರಿದರು.

ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ ಬಂದು ಇಲ್ಲಿ ಮುರುಘಾಮಠಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಅವರು ಬಳಿಕ ದಾವಣಗೆರೆಗೆ ಹೊರಟಿದ್ದರು. ಆದರೆ, ದಾರಿಯುದ್ದಕ್ಕೂ ಭಾರಿ ಜನಸ್ತೋಮ ಮತ್ತು ವಾಹನಗಳ ನಿಭಿಡತೆ ಇರುವುದು ಭದ್ರತಾ ಸಿಬ್ಬಂದಿಗಳನ್ನು ಕಂಗೆಡಿಸಿದೆ. ಲಕ್ಷಾಂತರ ಜನರು ಹತ್ತಾರು ಕಿ.ಮೀ. ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲೇ ಸಾಗಿಬರುತ್ತಿದ್ದಾರೆ.

ಸಮಾವೇಶ ಸ್ಥಳ ಮಾತ್ರವಲ್ಲ, ಹೊರಭಾಗದಲ್ಲೂ ಭಾರಿ ಸಂಖ್ಯೆಯಲ್ಲಿ ಜನ ಸೇರಿರುವುದರಿಂದ ರಾಹುಲ್‌ ಗಾಂಧಿ ಸಮಾವೇಶಕ್ಕೆ ಹೋಗುವ ಮಾರ್ಗವನ್ನೇ ಬದಲಿಸಲು ನಿರ್ಧರಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ೪೮ರಲ್ಲೇ ಸಮಾವೇಶ ಸ್ಥಳದವರೆಗೂ ಹೋಗುವ ಬದಲು ದಾವಣಗೆರೆ ಹೊರವಲಯದ ಬನ್ನಿಕೋಡು ಗ್ರಾಮದ ಮೂಲಕ ರಾಹುಲ್‌ ಗಾಂಧಿ ಅವರನ್ನು ವೇದಿಕೆಗೆ ಕರೆ ತರುವ ಪ್ರಯತ್ನವನ್ನು ನಡೆಸಲಾಗುತ್ತಿದೆ.

ನಿಜವೆಂದರೆ ಚಿತ್ರದುರ್ಗದಿಂದ ಸಮಾವೇಶದ ಸ್ಥಳಕ್ಕೆ ೪೫ ನಿಮಿಷ ಪ್ರಯಾಣದ ದಾರಿಯಷ್ಟೇ ಇದೆ. ಆದರೆ, ಅಲ್ಲೆಲ್ಲ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ. ಅವರನ್ನು ಬೇರೆ ಕಡೆಗೆ ಶಿಫ್ಟ್‌ ಮಾಡಲು ಕೂಡಾ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಹುಲ್‌ ಗಾಂಧಿ ಅವರ ಪ್ರಯಾಣಕ್ಕೆ ಬೇರೆ ದಾರಿ ಹುಡುಕುವುದರಲ್ಲಿ ಜಿಲ್ಲಾ ಪೊಲೀಸರು ಬ್ಯುಸಿಯಾಗಿದ್ದಾರೆ.

ಡಿಕೆಶಿ ಕೂಡಾ ಸಿಕ್ಕಿ ಹಾಕಿಕೊಂಡಿದ್ದಾರೆ
ಕಾರ್ಯಕ್ರಮದ ವೇದಿಕೆಯಿಂದ ಸುಮಾರು ೨೦ ಕಿ.ಮೀ. ಉದ್ದಕ್ಕೂ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಇನ್ನೂ ಆಗಮಿಸುತ್ತಲೇ ಇದ್ದಾರೆ. ಹೀಗಾಗಿ ರಾಹುಲ್‌ ಅವರ ಭೇಟಿಯೇ ಅಸ್ತವ್ಯಸ್ತವಾಗಿದೆ. ರಾಹುಲ್‌ ನಿಜವಾಗಿ ಮಧ್ಯಾಹ್ನ ೧ ಗಂಟೆಗೆ ವೇದಿಕೆಗೆ ಬಂದು ಮೂರು ಗಂಟೆಗೆ ಮರಳಬೇಕಿತ್ತು. ಆದರೆ, ಎರಡು ಗಂಟೆ ಕಳೆದರೂ ರಾಹುಲ್‌ಗೆ ವೇದಿಕೆಗೆ ಬರಲು ಸಾಧ್ಯವಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೂಡಾ ರಾಹುಲ್‌ ಗಾಂಧಿ ಅವರೊಂದಿಗೇ ಇದ್ದಾರೆ. ಅಂತಿಮವಾಗಿ ಎರಡು ಗಂಟೆಗೆ ಅವರು ವೇದಿಕೆ ತಲುಪಿದರು.

, ಅವರಿಗೂ ವೇದಿಕೆಗೆ ಬರಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ| ಸಿದ್ದರಾಮಯ್ಯ@75 | ಎಲ್ಲ ದಾರಿಗಳೂ ದಾವಣಗೆರೆಯತ್ತ, ನಿರೀಕ್ಷೆ ಮೀರಿ ಬಂದ ವಾಹನಗಳು, ಟ್ರಾಫಿಕ್‌ ಫುಲ್‌ ಜಾಮ್‌

Exit mobile version