Site icon Vistara News

Rahul Gandhi Fan : ರಾಹುಲ್‌ ಬೆನ್ನುಹತ್ತಿ ಬೆಂಗಳೂರಿಗೂ ಬಂದ ಫ್ಯಾನ್; ಯಾರೀ ಬರಿಗಾಲ ಅಭಿಮಾನಿ?‌

Rahul gandhi Fan Dinesh Sharma

ಬೆಂಗಳೂರು: ರಾಜಧಾನಿಯಲ್ಲಿ ಜುಲೈ 17 ಮತ್ತು 18ರಂದು ನಡೆಯಲಿರುವ ದೇಶದ ವಿಪಕ್ಷಗಳ ಸಭೆ (Opposition Meet)ಯಲ್ಲಿ ಭಾಗವಹಿಸುವುದಕ್ಕಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಆಗಮಿಸಿದ್ದಾರೆ. ಅಚ್ಚರಿ ಎಂದರೆ ಅವರಿಗಿಂತ ಮೊದಲು ಅವರ ಬರಿಗಾಲ ಅಭಿಮಾನಿ (Rahul Gandhi fan) ಬಂದು ಬಿಟ್ಟಿದ್ದಾನೆ.

ರಾಹುಲ್‌ ಗಾಂಧಿ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯಲಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲೆಲ್ಲ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಅಷ್ಟು ಹೊತ್ತಿಗೆ ಒಬ್ಬ ವ್ಯಕ್ತಿ ಬೈಕ್‌ನಲ್ಲಿ ಬಂದು ನೇರವಾಗಿ ನುಗ್ಗಲು ಯತ್ನಿಸಿದ್ದಾನೆ. ತಲೆಗೊಂದು ಕೇಸರಿ ರುಮಾಲು ಕಟ್ಟಿಕೊಂಡು ಮೈತುಂಬ ತ್ರಿವರ್ಣ ಧ್ವಜ ಬಣ್ಣದ ಕುರ್ತಾ ಹಾಕಿಕೊಂಡ ಈತನನ್ನು ಪೊಲೀಸರು ತಡೆದಿದ್ದಾರೆ. ಆಗ ಆತ ತನ್ನ ಬೈಕ್‌ನಿಂದ ದೊಡ್ಡದೊಂದು ತ್ರಿವರ್ಣ ಧ್ವಜವನ್ನು ತೆಗೆದು ರಸ್ತೆಯಲ್ಲೇ ನಿಂತು ಬೀಸತೊಡಗಿದ.

ʻʻನಾನು ದಿನೇಶ್‌ ಶರ್ಮ (Dinesh Sharma). ರಾಹುಲ್‌ ಗಾಂಧಿ ಅವರನ್ನು ನೋಡಲು ಬಂದಿದ್ದೇನೆʼʼ ಎಂದು ಹೇಳಿದ ಆತನ ದಿರಸಿನಲ್ಲಿ ರಾಹುಲ್‌ ಗಾಂಧಿಯ ಚಿತ್ರಗಳೂ ಇವೆ. ಪೊಲೀಸರು ಆತನನ್ನು ತಡೆದು ನಿಲ್ಲಿಸಿ ವಿವರ ಕೇಳಿದರು. ಅವನು ಸ್ಪಷ್ಟವಾಗಿಯೇ ವಿವರಣೆ ನೀಡಿದ. ನಾನು ರಾಹುಲ್‌ ಗಾಂಧಿ ಅವರ ಅಭಿಮಾನಿ. 11 ವರ್ಷಗಳಿಂದ ಅವರು ಎಲ್ಲೇ ಹೋದರೂ ನಾನು ಅವರು ಹೋದಲ್ಲಿಗೆ ಹೋಗುತ್ತೇನೆ. ಈಗ ಹರಿಯಾಣದಿಂದ ನೇರವಾಗಿ ಬೈಕ್‌ನಲ್ಲೇ ಬಂದಿದ್ದೇನೆ ಎಂದು ಹೇಳಿ, ರಾಹುಲ್‌ ಗಾಂಧಿ ಜತೆಗಿರುವ ಚಿತ್ರಗಳನ್ನು ತೋರಿಸಿದ. ಅಂದ ಹಾಗೆ ಈ ಮನುಷ್ಯ ಕಾಲಿಗೆ ಚಪ್ಪಲಿ ಕೂಡಾ ಹಾಕುವುದಿಲ್ಲ!

ರಾಹುಲ್‌ ರ‍್ಯಾಲಿಗಳಲ್ಲಿ ಪ್ರಧಾನ ಆಕರ್ಷಣೆ ದಿನೇಶ್‌ ಶರ್ಮ

ರಾಹುಲ್‌ ಗಾಂಧಿಯನ್ನು ಇಷ್ಟೊಂದು ಪ್ರೀತಿಸುವ ಈ ಯುವಕ ಯಾರಪ್ಪಾ ಎಂದು ಅಲ್ಲಿದ್ದವರೆಲ್ಲ ತಲೆಕೆಡಿಸಿಕೊಂಡರು. ಕೆಲವರು ಗೂಗಲ್‌ನಲ್ಲಿ ರಾಹುಲ್‌ ಗಾಂಧಿ ಫ್ಯಾನ್‌ ದಿನೇಶ್‌ ಶರ್ಮ ಎಂದು ಸರ್ಚ್‌ ಕೂಡಾ ಮಾಡಿದರು. ಆಗ ಕಂಡಿದ್ದೇ ದಿನೇಶ್‌ ಶರ್ಮಾ ಎಂಬ ರಾಹುಲ್‌ ಗಾಂಧಿಯ ಅಪ್ಪಟ ಅಭಿಮಾನಿಯ ಕಥೆ.

ಯಾರಿವನು ಪಂಡಿತ್‌ ದಿನೇಶ್‌ ಶರ್ಮ?

ನೀವು ಭಾರತ್‌ ಜೋಡೋ ಯಾತ್ರೆಯನ್ನು ಗಮನಿಸಿದ್ದರೆ, ಅದರಲ್ಲಿ ಯಾವಾಗಲೂ ರಾಹುಲ್‌ ಗಾಂಧಿಯ ಪಕ್ಕದಲ್ಲೇ ಸುಳಿದಾಡುತ್ತಾ, ದೊಡ್ಡದೊಂದು ಧ್ವಜವನ್ನು ಭಕ್ತಿಯಿಂದ ಎತ್ತರೆತ್ತರ ಹಾರಿಸುತಾ ಯುವಕನನ್ನು ನೋಡಿರುತ್ತೀರಿ. ಹೀಗೆ ರಾಹುಲ್‌ ಹೋದಲ್ಲೆಲ್ಲ ಹೋಗುವ ವ್ಯಕ್ತಿಯೇ ಈ ದಿನೇಶ್‌ ಶರ್ಮ.

ರಾಹುಲ್‌ ಗಾಂಧಿ ಜತೆಗೆ ದಿನೇಶ್‌ ಶರ್ಮ

28 ವರ್ಷದ ಈ ಯುವಕ ಕಾನೂನು ಪದವೀಧರ. ಕಳೆದ 12 ವರ್ಷಗಳಿಂದ ಮಳೆ ಇರಲಿ, ಬಿಸಿಲಿರಲಿ ಚಪ್ಪಲಿಯನ್ನೂ ಹಾಕದೆ ಸಾಗುತ್ತಿರುವವನು ಇವನು. ದಿನೇಶ್‌ ಶರ್ಮ ಎಷ್ಟು ಪ್ರಭಾವಿ ಎಂದರೆ ಸೆಕ್ಯುರಿಟಿಯವರಿದ್ದರೂ ರಾಹುಲ್‌ ಗಾಂಧಿ ಬಳಿಗೆ ಹೋಗಬಲ್ಲವನು. ಒಂದು ಸಾರಿ ಏನಾಯಿತೆಂದರೆ ಜಮ್ಮುವಿನ ಸಾಂಬಾಕ್ಕೆ ರಾಹುಲ್‌ ಗಾಂಧಿ ಬಂದಿದ್ದರು. ಎಂದಿನಂತೆ ದಿನೇಶ್‌ ಶರ್ಮ ಅಲ್ಲಿದ್ದ. ಅಲ್ಲಿ ಭದ್ರತೆ ಎಷ್ಟು ಬಿಗಿಯಾಗಿತ್ತೆಂದರೆ ಒಬ್ಬ ಮಾಜಿ ಸಂಸದರು ರಾಹುಲ್‌ ಗಾಂಧಿಯನ್ನು ಭೇಟಿಯಾಗಲು ಹೋರಾಟ ನಡೆಸುತ್ತಿದ್ದರು. ಆದರೆ, ಶರ್ಮ ಮಾತ್ರ ಯಾವುದೇ ಸಮಸ್ಯೆಯಿಲ್ಲದೆ ಹೋಗಿ ರಾಹುಲ್‌ ಗಾಂಧಿಯ ಕೈಕುಲುಕಿ ಬಂದಿದ್ದ!

ದಿನೇಶ್‌ ಶರ್ಮ ಕುಟುಂಬದ ಜತೆ ರಾಹುಲ್‌ ಗಾಂಧಿ

ಶರ್ಮನಿಗೆ ಯಾವ ಅಧಿಕಾರವೂ ಇಲ್ಲ

ರಾಹುಲ್‌ ಗಾಂಧಿಯ ಬೆನ್ನುಹತ್ತಿ ಹೀಗೆಲ್ಲ ಸುತ್ತಾಡುವ ದಿನೇಶ್‌ ಶರ್ಮ ಕಾಂಗ್ರೆಸ್‌ ಪಕ್ಷದಲ್ಲಿ ಏನೂ ಅಲ್ಲ. ಯಾವುದೇ ಹುದ್ದೆಇಲ್ಲ, ಕಾರ್ಪೊರೇಟರ್‌ ಅಲ್ಲ, ಎಂಎಲ್‌ಎ ಅಲ್ಲ. ಅಷ್ಟಾದರೂ ರಾಹುಲ್‌ ಗಾಂಧಿಗೆ, ಅವರ ಅವರ ಭದ್ರತಾ ಪರಿವಾರಕ್ಕೆ ಸಿಕ್ಕಾಪಟ್ಟೆ ಪರಿಚಯ. ಅವನೇನೂ ಪಂಡಿತ್‌ ಅಲ್ಲ. ಆದರೆ, ಧರಿಸೋ ಬಟ್ಟೆ ನೋಡಿ ಯಾರೂ ಪಂಡಿತ್‌ ಅಂದಿರಬೇಕು. ಹೀಗಾಗಿ ಪಂಡಿತ್‌ ಎಂದೇ ಪ್ರಸಿದ್ಧ.

ದಿನೇಶ್‌ ಶರ್ಮಾ ಹರಿಯಾಣದ ಜಿಂದ್‌ ಮೂಲದವನು. ಕಾನೂನು ಪದವಿ ಪಡೆದಿರುವ ಈತ 2011ರಿಂದಲೇ ರಾಹುಲ್‌ ಗಾಂಧಿ ಹೋದಲ್ಲಿಗೆಲ್ಲ ಹೋಗುತ್ತಿದ್ದಾನೆ.

ರಾಹುಲ್‌ ಗಾಂಧಿ, ಡಿ.ಕೆ. ಶಿವಕುಮಾರ್‌ ಜತೆ ಒರಿಜಿನಲ್‌ ದಿನೇಶ್ ಶರ್ಮ

ಬರಿಗಾಲಲ್ಲಿ ಓಡಾಡುವುದು ಯಾಕೆ?

ರಾಹುಲ್‌ ಗಾಂಧಿ ನನಗೆ ದೇವರ ಸಮಾನ. ಅವರು ಪ್ರಧಾನಿಯಾಗುವುದನ್ನು ನಾನು ಕಾಣಬೇಕು. ನಾನು ಅವರ ಅಭಿಮಾನಿ ಎನ್ನುವುದು ಅವರಿಗೆ ಗೊತ್ತಾಗಬೇಕಲ್ಲ. ನನ್ನ ಭಕ್ತಿ ಎಷ್ಟು ತಿಳಿಯಬೇಕಲ್ಲ. ಹಾಗಾಗಿ ಅವರು ಪ್ರಧಾನಿ ಆಗುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ ಎನ್ನುತ್ತಾನೆ ದಿನೇಶ್‌ ಶರ್ಮ.

ಅದೊಂದು ಸಾರಿ ರಾಹುಲ್‌ ಗಾಂಧಿಯೇ ಇವನನ್ನು ನಿಲ್ಲಿಸಿ ಕೇಳಿದರಂರೆ, ನಾನು ಹೋದಲ್ಲೆಲ್ಲ ಬರುವ ಕಷ್ಟ ಯಾಕೆ ತೆಗೆದುಕೊಳ್ತೀಯಾ ಅಂತ. ಆಗ ದಿನೇಶ್‌ ಶರ್ಮ: ಎಲ್ಲವೂ ನಿಮಗಾಗಿಯೇ ಸರ್‌ ಎಂದು ಹೆಮ್ಮೆಯಿಂದ ಹೇಳಿದನಂತೆ.

ಅದು ಹೌದು, ಓಡಾಟ, ಊಟಕ್ಕೇನು ಮಾಡ್ತಾನೆ?

ಹರಿಯಾಣದ ಬಿಂಡ್‌ನ ಕರ್ಕೋಡ್‌ ಗ್ರಾಮದಲ್ಲಿ ಅವರ ಕುಟುಂಬಕ್ಕೆ ಸಾಕಷ್ಟು ಜಮೀನಿದೆ. ನಾಲ್ಕು ಜನ ಮಕ್ಕಳಲ್ಲಿ ದಿನೇಶ್‌ ಶರ್ಮ ದೊಡ್ಡವನು.

2011ರಲ್ಲಿ ದಿನೇಶ್‌ 11ನೇ ಕ್ಲಾಸ್‌ನಲ್ಲಿದ್ದರು. ಆಗ ರಾಹುಲ್‌ ಗಾಂಧಿ ಉತ್ತರ ಪ್ರದೇಶದ ಟೂರ್‌ನಲ್ಲಿದ್ದರಂತೆ. ಆಗ ಅವರನ್ನೊಮ್ಮೆ ಭೇಟಿ ಮಾಡಬೇಕು ಎನ್ನುವ ಆಸೆ ಹುಟ್ಟಿಕೊಂಡಿತ್ತು. ʻʻಅದಕ್ಕೆ ನಮ್ಮ ಅಪ್ಪನೂ ಕಾರಣ. ನನ್ನ ಕುಟುಂಬ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿತ್ತು. ಗಾಂಧಿ ಕುಟುಂಬದ ಬಗ್ಗೆ, ದೇಶಕ್ಕಾಗಿ ಅದರ ತ್ಯಾಗದ ಬಗ್ಗೆ ಅವರು ಹೇಳಿದ್ದರು. ಇದರಿಂದ ನನಗೆ ಭೇಟಿಯ ಆಸೆ ಹುಟ್ಟಿತು. ನಾನು ಅಪ್ಪನಲ್ಲಿ ಹೇಳಿದಾಗ ಮೊದಲು ವಿದ್ಯಾಭ್ಯಾಸ ಮುಗಿಸು, ಆಮೇಲೆ ನಾನೇ ಕರೆದುಕೊಂಡು ಹೋಗುತ್ತೇನೆ ಎಂದರುʼʼ ಎಂದು ಶರ್ಮ ನೆನಪಿಸಿಕೊಳ್ಳುತ್ತಾನೆ.

ಪಿಯುಸಿ ಮುಗಿಸಿದ ನಂತರ ನಾನು ಹಿಸಾರ್‌ನ ಸಿ.ಆರ್‌ ಕಾನೂನು ಕಾಲೇಜಿನಲ್ಲಿ ಐದು ವರ್ಷದ ಕಾನೂನು ಪದವಿಗೆ ಸೇರಿಕೊಂಡೆ. ಇತ್ತೀಚೆಗಷ್ಟೇ ಡಿಗ್ರಿ ಮುಗಿದಿದೆ. ಅದರ ನಡುವೆ ನಾನು ರಾಹುಲ್‌ ಗಾಂಧಿ ಅವರ ಜತೆ ಸುತ್ತಾಟ ಶುರು ಮಾಡಿದ್ದೆ ಎನ್ನುತ್ತಾರೆ ದಿನೇಶ್‌ ಶರ್ಮ.

ಹಾಗಿದ್ದರೆ ಇಷ್ಟೆಲ್ಲ ಓಡಾಟಕ್ಕೆ, ಬೈಕ್‌ಗೆ, ವಿಮಾನಕ್ಕೆ, ಹೋದಲ್ಲಿ ಉಳಿದುಕೊಳ್ಳುವುದಕ್ಕೆ ದುಡ್ಡೆಲ್ಲಿಂದ ಬರುತ್ತದೆ? ಎಂದು ನೀವು ಕೇಳಬಹುದು? ಅದಕ್ಕೆ ದಿನೇಶ್‌ ಶರ್ಮ ಅವರೇ ಉತ್ತರ ಕೊಡುತ್ತಾರೆ.

ಇದನ್ನೂ ಓದಿ: Opposition Meet: ದೇಶದಲ್ಲಿ ತ್ರಿಶಂಕು ರಾಜಕಾರಣ ಖತಮ್; JDSಗೆ ದಮ್‌ ಇದ್ದರೆ ಸಭೆಗೆ ಬರುತ್ತದೆ ಎಂದ ಕಾಂಗ್ರೆಸ್‌‌

ʻʻನಾನು ಜಮೀನ್ದಾರರ ಕುಟುಂಬದಿಂದ ಬಂದವನು. ನನ್ನ ಸ್ವಂತ ಹಣವನ್ನೇ ಬಳಸುತ್ತೇನೆ. ನಾನು ಸಾಮಾನ್ಯವಾಗಿ ಒಂದು ಜಾಗದಿಂದ ಇನ್ನೊಂದು ಕಡೆಗೆ ರೈಲಿನಲ್ಲಿ ಹೋಗುತ್ತೇನೆ. ಹೋಟೆಲ್‌ಗಳಲ್ಲಿ ಉಳಿಯುತ್ತೇನೆ. ಕೆಲವೊಮ್ಮೆ ನನ್ನನ್ನು ಮೊದಲು ನೋಡಿರುವ ಕಾಂಗ್ರೆಸ್‌ ನಾಯಕರು ಆಹಾರ, ವಸತಿಗೆ ವ್ಯವಸ್ಥೆ ಮಾಡುತ್ತಾರೆʼʼ ಎನ್ನುತ್ತಾರೆ ದಿನೇಶ್‌ ಶರ್ಮ.

Exit mobile version