ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಬೆಳಗಾವಿಗೆ ಆಗಮಿಸಿ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ಕಾಂಗ್ರೆಸ್‌ನ ಚುನಾವಣೆ ರಣಕಹಳೆಗೆ ಇನ್ನಷ್ಟು ಉಸಿರು ತುಂಬಲಿದ್ದಾರೆ.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುವ ಕ್ರಾಂತಿ ಸಮಾವೇಶ ನಡೆಯಲಿದೆ. 50 ಸಾವಿರಕ್ಕೂ ಅಧಿಕ ಯುವಕರು, ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ. ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬ್ಯಾನರ್, ಪೋಸ್ಟರ್‌ಗಳು ನಗರದಲ್ಲಿ ರಾರಾಜಿಸುತ್ತಿವೆ.
ದೆಹಲಿಯಿಂದ ಮದ್ಯಾಹ್ನ 12ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದು, ಜತೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇರುತ್ತಾರೆ. ಅವರನ್ನು ರಾಜ್ಯ ನಾಯಕರು ಸ್ವಾಗತಿಸಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಸಿಪಿಎಡ್ ಮೈದಾನಕ್ಕೆ ಬರಲಿದ್ದಾರೆ.
ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ರೋಡ್ ಶೋ ಮಾಡಿದ್ದಾರೆ. ಅಮಿತ್ ಶಾ ಆಗಮನದ ಬಳಿಕ ಬಿಜೆಪಿ ಪ್ರಚಾರ ಯಂತ್ರ ಹೆಚ್ಚು ಚುರುಕಾಗಿದೆ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವದಲ್ಲಿ ಸಾಕಷ್ಟು ವ್ಯಾಪಕವಾಗಿಯೇ ಪ್ರಚಾರ ನಡೆಯುತ್ತಿದ್ದು, ಅದಕ್ಕೆ ರಾಹುಲ್ ಗಾಂಧಿ ಯಾವ ರೀತಿಯಲ್ಲಿ ಶಕ್ತಿ ತುಂಬಲಿದ್ದಾರೆ ನೋಡಬೇಕಿದೆ.
ರಾಜ್ಯದಲ್ಲಿ ಅಧಿಕಾರ ಹಿಡಿಯಲು ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗಿರುವುದರಿಂದ ಬೆಳಗಾವಿ ಜಿಲ್ಲೆಯನ್ನು ಕಾಂಗ್ರೆಸ್, ಬಿಜೆಪಿ ನಾಯಕರು ಟಾರ್ಗೆಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 18 ಕ್ಷೇತ್ರಗಳ ಪೈಕಿ 5ರಲ್ಲಿ ಮಾತ್ರ ಕಳೆದ ಸಾರಿ ಕಾಂಗ್ರೆಸ್ ಗೆಲುವು ಕಂಡಿದೆ. ಮುಂಬರುವ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ರಾಹುಲ್ ಗಾಂಧಿ ರ್‍ಯಾಲಿಯ ಸಂಪೂರ್ಣ ಜವಾಬ್ದಾರಿಯನ್ನು ಸತೀಶ ಜಾರಕಿಹೊಳಿ ಹೊತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರದಿಂದ ಯುವಕರನ್ನು ಕರೆತರುವಂತೆ ಶಾಸಕರು, ಟಿಕೆಟ್ ಆಕಾಂಕ್ಷಿಗಳಿಗೆ ಕಾಂಗ್ರೆಸ್ ನಾಯಕರಿಂದ ಟಾಸ್ಕ್ ಹೋಗಿದೆ. ಕಾಂಗ್ರೆಸ್‌ನಿಂದ ದೂರವಾಗಿರುವ ಯುವ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಹಂಚಿಕೆ ಹಾಕಿದ್ದು, ಈ ಹಿನ್ನೆಲೆಯಲ್ಲಿ ಯುವಕರಿಗೆ ಮಹತ್ವದ ಯಾವ ಘೋಷಣೆಯನ್ನು ರಾಹುಲ್ ಗಾಂಧಿ ಮಾಡಲಿದ್ದಾರೆ ಎಂಬ ಕುತೂಹಲವಿದೆ.
ಇದನ್ನೂ ಓದಿ: Rahul Gandhi: ಅದಾನಿ ಬಗ್ಗೆ ಮಾತಾಡಿದ್ದಕ್ಕೆ ಪೊಲೀಸರ ಆಗಮನ? ರಾಹುಲ್ ಗಾಂಧಿ ಪ್ರತಿಕ್ರಿಯೆಯಲ್ಲಿ ಇನ್ನೇನಿದೆ?