ವಿಜಯಪುರ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಹುಲ್ ಗಾಂಧಿ ಅವರೇ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದು, ಅವರು ಪ್ರಚಾರ ಮಾಡಿದಷ್ಟು ಬಿಜೆಪಿ ಪಕ್ಷಕ್ಕೆ ಲಾಭವಾಗುತ್ತದೆ. ಅವರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದರೆ ನಾನು ಸುಮಾರು 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಹುಲ್ ಗಾಂಧಿ ರೋಡ್ ಶೋ ಬಗ್ಗೆ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಿದ್ದ ಹಾಗೆ. ಅವರು ಹೋದಲ್ಲೆಲ್ಲ ಕಾಂಗ್ರೆಸ್ ನೆಲಕಚ್ಚಿ, ಬಿಜೆಪಿ ಜಯಭೇರಿ ಬಾರಿಸಿದೆ, ಮುಂದೆಯೂ ಜಯಗಳಿಸಲಿದೆ ಎಂದು ಲೇವಡಿ ಮಾಡಿದರು.
ಈ ಹಿಂದೆ ರಾಹುಲ್ ಗಾಂಧಿ ಬಸವಣ್ಣನವರ ವಚನವನ್ನೇ ಸರಿಯಾಗಿ ಹೇಳಿಲ್ಲ. ಅವರು ಹೇಗೆ ಲಿಂಗಾಯತರ ಪರವಾಗಿ ಮತಯಾಚನೆ ಮಾಡುತ್ತಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ: Karnataka Election 2023: ಕೇಸರಿ ಧ್ವಜ ಹಿಡಿದು ಬಂದವರಿಗೆ ನಮಸ್ತೆ, ನಾನೂ ಹಿಂದು; ಡಿಕೆಶಿ ಹಿಂದುತ್ವ ಮಂತ್ರ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿದ್ದಾರೆ. ಹಾಗಾದರೆ ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಸಿಎಂಗಳು ಭ್ರಷ್ಟರಾ ಎಂದು ಪ್ರಶ್ನಿಸಿದ ಯತ್ನಾಳ್, ಕೂಡಲೇ ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ಬೆಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಪಕ್ಷವನ್ನು ಹೀನಾಯ ಸ್ಥಿತಿಗೆ ತಂದಿದ್ದರು, ಅದನ್ನು ಮರೆತಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಬಗ್ಗೆ ಶಾಸಕ ಯತ್ನಾಳ್ ಆಡಿರುವ ಮಾತುಗಳ ವಿಡಿಯೊ ಇಲ್ಲಿದೆ
ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲಿಂಗಾಯತ ಡ್ಯಾಂ ಅನ್ನು ಒಡೆಯುತ್ತೇವೆ ಎಂದಿದ್ದಾರೆ, ಡ್ಯಾಮ್ ಒಡೆಯುವುದಲ್ಲ, ಅದರ ಒಂದು ಚಿಪ್ಪನ್ನು ಅಲ್ಲಾಡಿಸಲೂ ಸಾಧ್ಯವಿಲ್ಲ. ನಿಮ್ಮ ಹಣೆಬರಹಕ್ಕೆ ಮೇಕೆದಾಟು ಯೋಜನೆ ಮಾಡಿಕೊಳ್ಳಲಾಗಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: Rahul Gandhi: ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ 5 ಸಾವಿರ ರೂಪಾಯಿ ದೇಣಿಗೆ ನೀಡಿದ ರಾಹುಲ್ ಗಾಂಧಿ
ಮೇ 10ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಕೊನೇ ಮೊಳೆ
ಇನ್ನು ಮೇ 10ರಂದು, ಮತದಾನ ನಡೆಯಲಿದ್ದು, ಅಂದು ರಾಜ್ಯದ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಉಳಿದಿರುವ ಒಂದೇ ಒಂದು ಕೊನೆಯ ಮೊಳೆಯನ್ನು ಹೊಡೆಯುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಸಿಎಂ ಆಗಲು ಬಿಡುವುದಿಲ್ಲ, ಎಂ. ಬಿ. ಪಾಟೀಲ್ ಅವರನ್ನು ಸಿಎಂ ಆಗಲು ಎಲ್ಲಿ ಬಿಡುತ್ತಾರೆ? ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಎಂಬಿಪಿ ಸಿಎಂ ಆಗಲು ಬಿಡುತ್ತಾರಾ ಎಂದು ಪ್ರಶ್ನಿಸಿದರು.