ವಿಜಯಪುರ: ಕೂಡಲ ಸಂಗಮದಲ್ಲಿ ನಡೆದ ಬಸವ ಜಯಂತಿಯಲ್ಲಿ ಭಾಗಿಯಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಗರದಲ್ಲಿ ಭಾನುವಾರ ಸಂಜೆ ಬೃಹತ್ ರೋಡ್ ಶೋ (Karnataka Election) ನಡೆಸಿದರು. ಗಾಂಧಿ ಚೌಕಿಯಿಂದ ಬಸವೇಶ್ವರ ಸರ್ಕಲ್ ಮಾರ್ಗವಾಗಿ ಸಾಗಿದ ರೋಡ್ ಶೋ ಕನಕದಾಸ ವೃತ್ತದಲ್ಲಿ ಕೊನೆಯಾಯಿತು. ರೋಡ್ ಶೋದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ರೋಡ್ ಶೋದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಕರ್ನಾಟಕದಲ್ಲಿ ಈ ಬಾರಿ 150 ಸೀಟ್ ಪಡೆದು ನಾವು ಸರ್ಕಾರ ರಚಿಸುತ್ತೇವೆ. 40% ಕಮಿಷನ್ ಸರ್ಕಾರಕ್ಕೆ 40 ಸೀಟ್ ಕೂಡ ಸಿಗುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನಾವೆಲ್ಲರೂ ಬಸವಣ್ಣನ ಪ್ರಜಾಪ್ರಭುತ್ವವನ್ನು ನೆನಪು ಮಾಡಬೇಕು ಎಂದು ಕರೆ ನೀಡಿದರು.
ನಾನು ಬಸವಣ್ಣನವರ ವಿಚಾರಧಾರೆಗಳನ್ನು ಓದಿ ತಿಳಿದಿದ್ದೇನೆ. ದುರ್ಬಲರ ಮಕ್ಕಳು ಏಳಿಗೆಯಾಗಬೇಕು, ಮಹಿಳೆಯರ ರಕ್ಷಣೆಯಾಗಬೇಕೆಂಬ ವಿಚಾರಧಾರೆ ಬಸವಣ್ಣ ಅವರದ್ದಾಗಿತ್ತು. ಅವರ ವಿಚಾರಗಳ ಆಧಾರದ ಮೇಲೆ ನಮ್ಮ ಯೋಜನೆಗಳನ್ನು ರೂಪಿಸಲಾಗಿದೆ. ಹೀಗಾಗಿ 200 ಯುನಿಟ್ ಉಚಿತ ವಿದ್ಯುತ್, ಯುವ ನಿಧಿ, ಅನ್ನಭಾಗ್ಯ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ರಾಹುಲ್ ಗಾಂಧಿ ಅವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್: ಬಸನಗೌಡ ಪಾಟೀಲ್ ಯತ್ನಾಳ್
ಲೋಕಸಭಾ, ರಾಜ್ಯಸಭಾ, ಲೋಕತಂತ್ರದ ವ್ಯವಸ್ಥೆ ಬಸವಣ್ಣನವರ ಆಶಯದಂತೆ ಹುಟ್ಟುಹಾಕಲಾಗಿದೆ. ಅವರ ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ ಇರಬೇಕು ಎಂಬುದಾಗಿತ್ತು. ಶ್ರೀಮಂತರು, ಬಡವರು ಯಾವುದೇ ಧರ್ಮದ ಜನರು ಸಮಾನರಾಗಬೇಕು ಎಂಬ ಆಸೆ ಅವರಿಗಿತ್ತು. ಬಸವಣ್ಣನವರು ಸತ್ಯವನ್ನು ಎದುರಿಸಿ ನಡೆಯಿರಿ, ಹೆದರಬೇಡಿ ಎಂದು ತಿಳಿಸಿರುವುದಾಗಿ ಹೇಳಿದರು.
ಬಿಜೆಪಿ, ಆರ್‌ಎಸ್‌ಎಸ್‌ನವರು ದೇಶದ ಪರಸ್ಥಿತಿಯನ್ನು ಅಯೋಮಯ ಮಾಡಿದ್ದಾರೆ. ಬಿಜೆಪಿಯವರು ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ, ಆದರೆ ಅವರ ಆಶಯದ ವಿರುದ್ಧ ನಡೆದುಕೊಳ್ಳುತ್ತಾರೆ. ದೊಡ್ಡ ದೊಡ್ಡವರಿಗೆ ಸಹಾಯ ಮಾಡಿ ಎಂದು ಬಸವಣ್ಣನವರು ಎಲ್ಲಿಯೂ ಹೇಳಿಲ್ಲಾ. ಅದಾನಿಗೂ ಪ್ರಧಾನಿಗೂ ಸಂಬಂಧವೇನು? ದೇಶದ ಏರ್‌ಪೋರ್ಟ್‌ಗಳು ಸೇರಿ ಎಲ್ಲವನ್ನೂ ಅದಾನಿಗೆ ಧಾರೆ ಎರೆಯಲಾಗುತ್ತಿದೆ. ಲೋಕಸಭೆಯಲ್ಲಿ ಈ ಎಲ್ಲದರ ಕುರಿತು ಪ್ರಶ್ನಿಸಿದ್ದೇನೆ. ಮೊದಲು ನನ್ನ ಭಾಷಣ ಆಫ್ ಮಾಡಿದರು, ಕಡತದಿಂದ ಭಾಷಣ ತೆಗೆದರು. ನಂತರ ನನ್ನನ್ನು ಲೋಕಸಭೆಯಿಂದಲೇ ಹೊರಗೆ ಕಳುಹಿಸಿದರು. ಸತ್ಯವನ್ನು ಲೋಕಸಭೆಯಲ್ಲಿ ಮಾತ್ರವಲ್ಲ ಹೊರಗೂ ಅನಾವರಣ ಮಾಡಬಹುದು ಎಂದು ಕಿಡಿಕಾರಿದರು.
ಬಸವಣ್ಣನ ವಿಚಾರಧಾರೆಗಳನ್ನು ಸಾಕಷ್ಟು ಓದಿದ್ದೇನೆ. ಅವುಗಳಲ್ಲಿ ಎಲ್ಲಿಯೂ 40% ಕಮಿಷನ್ ಪಡೆದು ಲೂಟಿ ಮಾಡಿ ಎಂದು ಬರೆದಿಲ್ಲ. ಬಿಜೆಪಿ ಸರ್ಕಾರ ಭಾರತದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ. ಏನೇ ಕೆಲಸ ಮಾಡಲಿ 40% ಕಮಿಷನ್ ಪಡೆದೇ ತೀರುತ್ತಾರೆ. ಪೊಲೀಸ್, ಎಂಜಿನಿಯರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ 80 ಲಕ್ಷ ರೂಪಾಯಿ ಪಡೆಯುತ್ತಾರೆ. 40% ಕಮಿಷನ್ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ಕುರಿತು ಪತ್ರ ಬರೆದರು. ಇದುವರೆಗೂ ಪಿಎಂ ಉತ್ತರಿಸಿಲ್ಲ, ಉತ್ತರಿಸುವುದೂ ಇಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ವೇದಿಕೆಗಳ ಮೇಲೆ ತಾವು ಭ್ರಷ್ಟಾಚಾರದ ವಿರೋಧಿ ಎನ್ನುತ್ತಾರೆ. ನಿಮ್ಮ ಅಕ್ಕ ಪಕ್ಕ ಇರುವವರೇ 40% ಕಮಿಷನ್ ತಿನ್ನುತ್ತಾರೆ. ಅದೇ ಹಣದಿಂದ ಶಾಸಕರ ಕುದುರೆ ವ್ಯಾಪಾರ ಮಾಡಿ ಸರ್ಕಾರ ರಚಿಸುತ್ತಾರೆ. ಪಿಎಂ ಅವರೇ, ದೇಶದ ನಾನಾ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಲು ಹಣ ಎಲ್ಲಿಂದ ಬರುತ್ತದೆ ಎಂಬುವುದಕ್ಕೆ ಉತ್ತರಿಸಿ ಒತ್ತಾಯಿಸಿದರು.
ಇದನ್ನೂ ಓದಿ | Karnataka Congress: ಕಾಂಗ್ರೆಸ್ ಸೇರಿದ ಒಂದೇ ದಿನಕ್ಕೆ ರಾಣಿ ಸಂಯುಕ್ತಗೆ ಪ್ರಧಾನ ಕಾರ್ಯದರ್ಶಿ ಹುದ್ದೆ: ಭಾವನಾ ವಕ್ತಾರೆ
ನಾನು ಹಿಂದುತ್ವದ ಬಗ್ಗೆ ತಪ್ಪಾಗಿ ಮಾತಾಡಿದ್ದೇನೆ ಎಂದು ಹಲವು ಕೇಸ್ ಹಾಕಿದ್ದಾರೆ. ನಾನು ಯಾರ ಬಗ್ಗೆಯೂ ತಪ್ಪು ಶಬ್ದ ಬಳಕೆ ಮಾಡಿಲ್ಲಾ. ಮನೆ ಕಸಿದುಕೊಂಡಿದ್ದರಿಂದ ಸಾವಿರಾರು ಅಭಿಮಾನಿಗಳು ನಮ್ಮ ಮನೆಗೆ ಬನ್ನಿ ಅಂತ ಪತ್ರ ಬರೆದಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಜನರು ಈ ಬಾರಿ ಕಾಂಗ್ರೆಸ್‌ಗೆ 150 ಸೀಟ್ ಕೊಡಿ, ಬಿಜೆಪಿಗೆ 40 ಪರ್ಸೆಂಟ್ ಕಮಿಷನ್ ಬೇಕಲ್ಲವೇ ಅವರಿಗೆ 40 ಸೀಟ್ ಕೊಡಿ ಎಂದು ಹೇಳಿದರು.