ನವದೆಹಲಿ/ಬೆಂಗಳೂರು: 2019ರಲ್ಲಿ ಕೋಲಾರದಲ್ಲಿ ನಡೆದ ಚುನಾವಣೆ ರ‍್ಯಾಲಿ ವೇಳೆ “ಮೋದಿ ಉಪನಾಮ ಇರುವವರೆಲ್ಲರೂ ಕಳ್ಳರೇ” ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಸೂರತ್ ನ್ಯಾಯಾಲಯವು ಎರಡು ವರ್ಷ ಜೈಲುಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆ ಘೋಷಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಅನರ್ಹರಾಗಿದ್ದಾರೆ. ಮತ್ತೊಂದೆಡೆ, ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಕೋಲಾರದಿಂದಲೇ ಚುನಾವಣೆ ಪ್ರಚಾರ ಆರಂಭಿಸಲು ರಾಹುಲ್ ಗಾಂಧಿ ಅವರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಮೇ 10ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಬಿಜೆಪಿಯು ಚುನಾವಣೆಗೆ ಸಕಲ ಸಿದ್ಧತೆ ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪದೇಪದೆ ಕರ್ನಾಟಕಕ್ಕೆ ಆಗಮಿಸಿ, ಪ್ರಚಾರ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಬಿರುಸಿನ ಪ್ರಚಾರ ಕೈಗೊಳ್ಳುತ್ತಿವೆ. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ಕೂಡ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಲಿದ್ದಾರೆ. ಅದರಲ್ಲೂ, ಮೋದಿ ಉಪನಾಮ ಕುರಿತು ಮಾತನಾಡಿದ ಕೋಲಾರದಿಂದಲೇ ಏಪ್ರಿಲ್ 5ರಿಂದ ಅವರು ಚುನಾವಣೆ ಪ್ರಚಾರಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಲಾರದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಏಪ್ರಿಲ್ 5ರಂದು ರಾಹುಲ್ ಗಾಂಧಿ ಅವರು ಬೃಹತ್ ಸಮಾವೇಶ ನಡೆಸುವ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆಯ ರಣರಂಗಕ್ಕೆ ಇಳಿಯಲಿದ್ದಾರೆ. ಮೋದಿ ವಿರುದ್ಧ ಮಾತನಾಡಿದ ಸ್ಥಳದಿಂದಲೇ ಚುನಾವಣೆ ಪ್ರಚಾರ ಕೈಗೊಳ್ಳುವ ಮೂಲಕ ಅವರು ಬಿಜೆಪಿಗೆ ತಿರುಗೇಟು ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ರಾಹುಲ್ ಗಾಂಧಿ ಅವರು, “ನೀರವ್ ಮೋದಿ, ಲಲಿತ್ ಮೋದಿ ಹಾಗೂ ನರೇಂದ್ರ ಮೋದಿ ಸರ್‌ನೇಮ್ ಒಂದೇ ಆಗಿದೆ. ಅದ್ಹೇಗೆ, ಮೋದಿ ಉಪನಾಮ ಇರುವವರೆಲ್ಲರೂ ಕಳ್ಳರಾಗಿರುತ್ತಾರೆ” ಎಂದು ಹೇಳಿದ್ದರು. ಈ ಭಾಷಣ ಕೇಳಿದ ಕೋಲಾರ ಬಿಜೆಪಿ ನಾಯಕ ಪಿ.ಎಂ.ರಘುನಾಥ್ ಅವರು ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರಿಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದರು.
ಇದಾದ ಬಳಿಕವೇ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದರು ಎಂದು ತಿಳಿದುಬಂದಿದೆ. ಅಲ್ಲದೆ, ರಾಹುಲ್ ಗಾಂಧಿ ಭಾಷಣದ ಕುರಿತು ಮಾಧ್ಯಮಗಳ ವರದಿ, ವಿಡಿಯೊಗಳನ್ನು ರಘುನಾಥ್ ಅವರು ಪೂರ್ಣೇಶ್ ಮೋದಿ ಅವರಿಗೆ ಕಳುಹಿಸಿದ್ದರು. ಆ ಮೂಲಕ ರಾಹುಲ್ ಭಾಷಣವನ್ನು ಗುಜರಾತ್‌ವರೆಗೆ ತಲುಪಿಸಿದ್ದರು. ಇದೆಲ್ಲ ಪ್ರಕ್ರಿಯೆ ಬಳಿಕ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ