ವಿಜಯಪುರ/ಬಾಗಲಕೋಟೆ: ಕೋಲಾರ, ಬೀದರ್ ಭೇಟಿ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಏಪ್ರಿಲ್ 23ರಂದು ಬಾಗಲಕೋಟೆ, ವಿಜಯಪುರ ಜಿಲ್ಲಾ ಪ್ರವಾಸ (Karnataka Election 2023) ಕೈಗೊಂಡಿದ್ದಾರೆ. ಬಸವ ಜಯಂತಿ ಹಿನ್ನೆಲೆಯಲ್ಲಿ ಬಾಗಲಕೋಟೆಯ ಕೂಡಲ ಸಂಗಮಕ್ಕೆ ಅವರು ಭೇಟಿ ನೀಡಲಿದ್ದು, ನಂತರ ವಿಜಯಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಬಸವ ಜಯಂತಿಯಂದೇ ಕೈ ನಾಯಕ ಕೂಡಲಸಂಗಮಕ್ಕೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಏ.23ರ ರಾಹುಲ್ ಗಾಂಧಿ ಕಾರ್ಯಕ್ರಮಗಳ ವೇಳಾಪಟ್ಟಿ
- ಬೆಳಗ್ಗೆ 7.20ಕ್ಕೆ ದೆಹಲಿ ಏರ್ಪೋರ್ಟ್ನಿಂದ ಹೈದರಾಬಾದ್ಗೆ ರಾಹುಲ್ ಗಾಂಧಿ ಪ್ರಯಾಣ
- 10 ಗಂಟೆಗೆ ಹೈದರಾಬಾದ್ನಿಂದ ಹುಬ್ಬಳ್ಳಿಯತ್ತ ಪ್ರಯಾಣ
- 10.50ಕ್ಕೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿ 11.40ಕ್ಕೆ ಬಾಗಲಕೋಟೆಯ ಕೂಡಲಸಂಗಮ ಕ್ಷೇತ್ರಕ್ಕೆ ಆಗಮನ
- 11.50 ರಿಂದ 12.10ರವರೆಗೆ ಕೂಡಲಸಂಗಮ ದೇವಸ್ಥಾನ ಹಾಗೂ ಬಸವಣ್ಣನವರ ಐಕ್ಯ ಮಂಟಪ ದರ್ಶನ
- ಮಧ್ಯಾಹ್ನ 12.15 ರಿಂದ 1.30ರವರೆಗೆ ಕೂಡಲಸಂಗಮದ ಬಸವ ಮಂಟಪದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿ
- 1.40 ರಿಂದ 2.10 ಕೂಡಲಸಂಗಮದಲ್ಲಿನ ದಾಸೋಹ ಭವನದಲ್ಲಿ ಪ್ರಸಾದ ಸೇವನೆ
- 2.15ರಿಂದ 4.15 ರವರೆಗೆ ಕೂಡಲಸಂಗಮದಲ್ಲಿನ ಯಾತ್ರಿ ನಿವಾಸದಲ್ಲಿ ವಿಶ್ರಾಂತಿ
- 4-25ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರದತ್ತ ಪ್ರಯಾಣ
- 4.50ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರ ತಲುಪಲಿರುವ ರಾಹುಲ್ ಗಾಂಧಿ
- ಸಂಜೆ 5 ಗಂಟೆಯಿಂದ 6-30 ವರೆಗೆ ರೋಡ್ ಶೋ ನಡೆಸಲಿದ್ದಾರೆ
- ನಗರದ ಶಿವಾಜಿ ಚೌಕ್ನಿಂದ ಕನಕದಾಸ ವೃತ್ತದವರೆಗೂ ರೋಡ್ ಶೋ ನಡೆಸಿದ ಬಳಿಕ
ರಾತ್ರಿ ವಿಜಯಪುರ ನಗರದಲ್ಲಿ ವಾಸ್ತವ್ಯ.
ಇದನ್ನೂ ಓದಿ | Karnataka Election: ಲಿಂಗಾಯತ ಮುಖ್ಯಮಂತ್ರಿಗಳೇ ರಾಜ್ಯವನ್ನು ಹಾಳು ಮಾಡಿದ್ದು ಎಂದ ಸಿದ್ದರಾಮಯ್ಯ: ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ಆರಂಭ
ಬಸವ ಜಯಂತಿಯಲ್ಲಿ ರಾಹುಲ್ ಗಾಂಧಿ ಭಾಗಿ
ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಸವಣ್ಣನವರ ಐಕ್ಯ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ವಿಶ್ವಗುರು ಬಸವಣ್ಣನವರ ಜಯಂತಿ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಭಾನುವಾರ (ಏ.23) ಭೇಟಿ ನೀಡಲಿದ್ದಾರೆ. ಈ ವೇಳೆ ಬಸವಣ್ಣನವರ ಐಕ್ಯ ಸ್ಥಳ ಭೇಟಿ ಬಳಿಕ, ಬಳಿಕ ಸಂಗಮನಾಥನ ದರ್ಶನವನ್ನೂ ಮಾಡಲಿದ್ದಾರೆ. ನಂತರ ಬಸವ ಮಂಟಪದಲ್ಲಿ ಬಸವ ಉತ್ಸವ ಸಮಿತಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಭಾಷಣ ಇರುವದಿಲ್ಲ. ಇಲ್ಲಿ ಕೇವಲ ಬಸವಣ್ಣನವರ ಕುರಿತು ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಲ್ಕಿಯ ಬಸವಲಿಂಗ ಪಟ್ಟದೇವರು, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಇಳಕಲ್ ಮಹಾಂತ್ ಮಠದ ಗುರುಮಹಾಂತ್ ಶ್ರೀಗಳು, ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಭಾಗಿಯಾಗಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಸೇರಿ ಹಲವರು ಭಾಗಿಯಾಗುವ ಸಾಧ್ಯತೆ ಇದೆ.