ಬೆಂಗಳೂರು: ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮತ್ತೆ ಮುಂದೂಡಿಕೆಯಾಗಿದೆ. ಏಪ್ರಿಲ್ 9 ರಂದು ಕೋಲಾರದಲ್ಲಿ ನಿಗದಿಯಾಗಿದ್ದ ʼಸತ್ಯಮೇವ ಜಯತೇʼ ಸಮಾವೇಶವನ್ನು ಮತ್ತೆ ಮುಂದೂಡಲಾಗಿದೆ. ಶುಕ್ರವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಕೋಲಾರ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಏ.5ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಏ. 9ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಏ.16ಕ್ಕೆ ಸಮಾವೇಶ (Satyameva Jayate) ಆಯೋಜಿಸುವ ಸಾಧ್ಯತೆ ಇದೆ.
ಎಲ್ಲ ಕಳ್ಳರ ಉಪನಾಮ ಮೋದಿ ಎಂದೇ ಯಾಕಿರುತ್ತದೆʼ ಎಂಬ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು. ಈ ಹಿಂದೆ ರಾಹುಲ್ ಗಾಂಧಿ ಕೋಲಾರದಲ್ಲೇ ವಿವಾದಿತ ಹೇಳಿಕೆ ನೀಡಿದ್ದರು. ಹೀಗಾಗಿ ಸಂವಿಧಾನ ಉಳಿಸುವ ಹೋರಾಟ ʼಸತ್ಯಮೇವ ಜಯತೇʼ ಕೋಲಾರದಿಂದಲೇ ಆರಂಭಿಸುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಪ್ರವಾಸ ಹಮ್ಮಿಕೊಂಡಿರುವ ದಿನ ಏಪ್ರಿಲ್ 9ರಂದೇ ʼಸತ್ಯಮೇವ ಜಯತೇʼ ಹೋರಾಟಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿ ನಿರ್ಧರಿಸಿದ್ದರು. ಆದರೆ, ಕಾರಣಾಂತರಗಳಿಂದ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ.
ದೇಶದ ಜನರಿಗಾಗಿ ರಾಹುಲ್ ಗಾಂಧಿ ಹೋರಾಟ
ಇದು ಬರೀ ರ‍್ಯಾಲಿ ಅಲ್ಲ. ದೇಶದಲ್ಲಿ ಶಾಂತಿ ನೆಲೆಸಲು ಹೋರಾಟ. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನ ಅಪಾಯದಲ್ಲಿವೆ. ಇದನ್ನು ಉಳಿಯುವ ಜವಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ. ಬಿಜೆಪಿಯವರ ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಉಳಿಸಬೇಕು ಎಂದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕು. ರಾಹುಲ್ ಗಾಂಧಿಯವರು ಸ್ವಾರ್ಥಕ್ಕಾಗಿ ಈ ಹೋರಾಟ ಮಾಡುತ್ತಿಲ್ಲ. ದೇಶದ ಜನರಿಗಾಗಿ ಹೋರಾಟ ಪ್ರಾರಂಭ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಬಿಜೆಪಿಯವರು ದ್ವೇಷದ, ಸೇಡಿನ ರಾಜಕಾರಣ ಮಾಡಿ ಅಶಾಂತಿ ಸೃಷ್ಟಿ ಮಾಡಿದ್ದಾರೆ. ದಲಿತರು, ಮಹಿಳೆಯರು, ರೈತರ ಸೇರಿದಂತೆ ಯಾರು ಸಹ ನೆಮ್ಮದಿಯಿಂದ ಇಲ್ಲ. ಬೇರೆಯವರಿಗೆ ಭಯ ಮೂಡಿಸಲು ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿ, ಸರ್ಕಾರಿ ಮನೆಯಿಂದ ಹೊರ ಹಾಕಿದ್ದಾರೆ. ಒಂದು ದೇಶ, ಭಾಷೆ, ಮೇಲೆ ನಂಬಿಕೆ ಇಟ್ಟುವರು ಬಿಜೆಪಿಯವರು ಮುಸಲೋನಿ, ಹಿಟ್ಲರ್ ವಂಶಸ್ಥರಾಗಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದರು.