ರಾಯಚೂರು: ಹೃದಯಾಘಾತದಿಂದ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದ ನೌಕರ ಮೃತಪಟ್ಟಿದ್ದಾರೆ. ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದೆ. ಗಂಗಪ್ಪ ದಿವಾನಿ ( 30) ಮೃತ ದುರ್ದೈವಿ. ಜಾಗೀರ್ ವೆಂಕಟಾಪುರ ಗ್ರಾಮದ ಗುತ್ತಿಗೆ ನೌಕರನಾಗಿದ್ದ ಗಂಗಪ್ಪ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ವಿದ್ಯುತ್ ಕೇಂದ್ರದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ವೈಟಿಪಿಎಸ್‌ನಲ್ಲಿ ನೌಕರ ಮೃತಪಟ್ಟಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರೆಂಟ್ ಶಾಕ್‌ಗೆ ವ್ಯಕ್ತಿ ಸಾವು
ಪಂಪ್ ಸೆಟ್ ದುರಸ್ತಿ ವೇಳೆ ಕರೆಂಟ್ ಶಾಕ್ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ರಾಯಚೂರಲ್ಲಿ ಲಿಂಗಸಗೂರು ತಾಲೂಕಿನ ಮರಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗಲಾಪುರ ಗ್ರಾಮದ ನಿವಾಸಿ ಶಿವು (33) ಮೃತಪಟ್ಟವರು. ಟ್ರ್ಯಾಕ್ಟರ್ ಮೂಲಕ ಪಂಪ್ ಸೆಟ್ ದುರಸ್ತಿ ಮಾಡುತ್ತಿದ್ದಾಗ, ಟ್ರ್ಯಾಕ್ಟರ್‌ಗಿದ್ದ ಉದ್ದದ ಪೈಪ್ ಮೈನ್ ಲೈನ್ ತಾಗಿ ಅವಘಡ ಸಂಭವಿಸಿದೆ. ರೈತರ ಕೃಷಿ ಭೂಮಿಯಲ್ಲಿ ಮೇಲ್ಭಾಗದಲ್ಲಿ ಲೈನ್ ಹಾದು ಹೋಗಿದೆ. ಘಟನೆಯಲ್ಲಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಮುದ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಕೂಟಿಗೆ ಕಾರು ಡಿಕ್ಕಿ; ಶಿಕ್ಷಕರು ಗಂಭೀರ
ಸ್ಕೂಟಿಗೆ ಕಾರು ಡಿಕ್ಕಿಯಾಗಿದ್ದು, ಓರ್ವ ಶಿಕ್ಷಕನ ಸ್ಥಿತಿ ಗಂಭೀರವಾಗಿದ್ದರೆ ಇನ್ನೋರ್ವ ಶಿಕ್ಷಕನಿಗೆ ಗಾಯವಾಗಿದೆ. ಕೊಪ್ಪಳ ಜಿಲ್ಲೆಯ ಬೂದಗುಂಪಾ ಬಳಿಯ ಬೂದೇಶ್ವರ ದೇವಸ್ಥಾನ ಕ್ರಾಸ್ ಬಳಿ ಘಟನೆ ನಡೆದಿದೆ. ಶಿಕ್ಷಕ ಭೋಜಪ್ಪ ಮೈನಹಳ್ಳಿ( 55 ) ಸ್ಥಿತಿ ಗಂಭೀರವಾಗಿದ್ದರೆ, ವಿಜಯಕುಮಾರ್ ದಾವಣಗೆರೆ ( 45) ಎನ್ನುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಕರಡಿ ಸಂಗಣ್ಣ ಮಾನವೀಯತೆ ಮೆರೆದಿದ್ದಾರೆ. ಆಂಬ್ಯುಲೇನ್ಸ್‌ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕೂಟಿ ಡಿಕ್ಕಿ ಹೊಡೆದು ಎಸ್ಕೇಪ್ ಆಗುತ್ತಿದ್ದ ಕಾರು ಚಾಲಕನನ್ನು ಪೊಲೀಸರು ಹಿಡಿದಿದ್ದಾರೆ.