Site icon Vistara News

BJP-JDS Alliance : ಮೈತ್ರಿ ವಿರುದ್ಧ ಸಿಡಿದೆದ್ದ ದೇವದುರ್ಗ ಶಾಸಕಿ; ನನ್ನ, ಮಗಳ ಮೇಲೆ ಅಟ್ಯಾಕ್‌ ಮಾಡಿದವರ ಜತೆ ಸ್ನೇಹ ಸಾಧ್ಯವೇ ಇಲ್ಲ

Devadurga MLA Karemma oppose alliance

ರಾಯಚೂರು: ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಗೆ (BJP-JDS Alliance) ಜಾತ್ಯತೀತ ಜನತಾದಳದೊಳಗೆ (Janatadal Secular) ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ಸದ್ದಿಲ್ಲದೆ ಕಾಂಗ್ರೆಸ್‌ ಕಡೆಗೆ ಸಾಗಲು ಸಿದ್ಧತೆ ನಡೆಸುತ್ತಿದ್ದರೆ, ಕೆಲವರು ಬಹಿರಂಗವಾಗಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯಲ್ಲೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ.

ರಾಯಚೂರು ಜಿಲ್ಲೆ (Raichur News) ದೇವದುರ್ಗದ ಜೆಡಿಎಸ್‌ ಶಾಸಕಿ (Devadurga JDS MLA) ಕರೆಮ್ಮ (JDS MLA Karemma) ಅವರಂತೂ ಯಾವ ಕಾರಣಕ್ಕೂ ನಾನು ಬಿಜೆಪಿಯವರ ಜತೆ ನನ್ನ ಕ್ಷೇತ್ರದಲ್ಲಿ ಮೈತ್ರಿ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ (Alliance is impossible) ಎಂದಿದ್ದಾರೆ.

ಮೈತ್ರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿರುವ ಜೆಡಿಎಸ್ ಶಾಸಕಿ ಕರೆಮ್ಮ ಅವರು ದೇವದುರ್ಗ ಕ್ಷೇತ್ರದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸತತವಾಗಿ ನನಗೆ ಕಾಟ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಮತ್ತು ನನ್ನ ಮಗಳ ಮೇಲೆ ಅಟ್ಯಾಕ್ ಮಾಡಿದರು ಎಂದು ನೋವಿನಿಂದ ಹೇಳಿದರು.

ʻʻಮರಳಿನ ವಿಚಾರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿಯವರು ಚಪ್ಪಲಿಯಿಂದ ಹೊಡೆಯುವುದಾಗಿ ಹೇಳಿದರು. ವಿದ್ಯುತ್‌ ಕಾರ್ಮಿಕರೊಬ್ಬರು ಸತ್ತಾಗ ಅನ್ಯಾಯ ಮಾಡಿದರು. ಇದೆಲ್ಲ ಬಿಜೆಪಿಯ ಮಾಜಿ ಶಾಸಕರು, ಕಾರ್ಯಕರ್ತರು ದೇವದುರ್ಗದಲ್ಲಿ ಬಿಜೆಪಿಯವರು ಏನೇನೂ ಕಷ್ಟ ನೀಡಿದ್ದಾರೆ ಎಂಬುವುದು ನನ್ನ ವರಿಷ್ಠರಿಗೆ ಗೊತ್ತಿದೆʼʼ ಎಂದು ಅವರು ಹೇಳಿದರು.

ʻʻವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಂಚರತ್ನ ವಾಹನದ ಮೇಲೆ ಕಲ್ಲು ತೂರಾಟ ಮಾಡಿದರು. ನನ್ನ ಬ್ಯಾನರ್ ಹರಿದರು. ಚಾಲಕನ ಮೇಲೆ ಹಲ್ಲೆ ಮಾಡಿದರುʼʼ ಎಂದು ಹೇಳಿದರು ಕರೆಮ್ಮ.

ಎಲ್ಲಿ ಬೇಕಾದರೂ ಮಾಡಿಕೊಳ್ಳಲಿ, ದೇವದುರ್ಗದಲ್ಲಿ ಮೈತ್ರಿ ಇಲ್ಲವೇ ಇಲ್ಲ

ʻʻನನ್ನ ಪಕ್ಷ ನನಗೆ ದೇವರು, ನಮ್ಮ ವರಿಷ್ಠರ ಬಗ್ಗೆ ನಾನು ಮಾತನಾಡಲ್ಲ. ಆದರೆ, ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ. ಜನರ ತೀರ್ಮಾನವೇ ನನ್ನ ತೀರ್ಮಾನ. ನನ್ನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಆಗಲ್ಲʼʼ ಎಂದು ಸ್ಪಷ್ಟವಾಗಿ ಹೇಳಿದರು.

ದೇವೇಗೌಡರ ಮಗಳು ನಾನು, ನನ್ನ ಕಷ್ಟ ಅವರಿಗೆ ಗೊತ್ತು

ಪಕ್ಷವೇ ನಿಮಗೆ ಹೇಳಿದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ʻʻಬಿಜೆಪಿ ಜೊತೆಗೆ ಮೈತ್ರಿ ‌ಮಾಡಿಕೊಳ್ಳಲು ವರಿಷ್ಠರು ನನಗೆ ಹೇಳಲ್ಲ. ನನ್ನ ಕಷ್ಟ ಏನು ಅಂತ ನಮ್ಮ ವರಿಷ್ಠರಿಗೆ ಗೊತ್ತು. ನನಗೆ ದೇವೇಗೌಡರು ಕಾರ್ಯಕರ್ತೆಯಾಗಿ ನೋಡಿಲ್ಲ. ದೇವೇಗೌಡರು ‌ನನಗೆ ಮಗಳ ಸಮಾನವಾಗಿ ನೋಡಿದ್ದಾರೆ. ನನಗೆ ನೋವು ಆದಾಗ ಅವರು ಕಷ್ಟ ಮತ್ತು ನೋವು ಪಟ್ಟಿದ್ದಾರೆ. ನನ್ನ ಪಾರ್ಟಿ ಯಾವತ್ತೂ ನನಗೆ ಟಾರ್ಗೆಟ್ ಮಾಡಲ್ಲ. ನೀನೂ ಹೇಗೆ ಇರುತ್ತೋ ಹಾಗೇ ಇರು ಅಮ್ಮ ಎಂದು ಹೇಳಿದ್ದಾರೆʼʼ ಎಂದು ಕರೆಮ್ಮ ನುಡಿದರು.

ಕುಮಾರಣ್ಣನಿಗೆ ಕೆಟ್ಟದಾಗಿ ಬೈದವನ ಜತೆ ಎಂಥಾ ಮೈತ್ರಿ?

ʻʻವಿಧಾನಸಭಾ ಚುನಾವಣೆಯಲ್ಲಿ ಕುಮಾರಣ್ಣಗೆ ಚಾಲೆಂಜ್ ಮಾಡಿದ ವ್ಯಕ್ತಿ ಇಲ್ಲಿ ಇದ್ದಾನೆ. ಕುಮಾರಣ್ಣನಿಗೆ ಕೆಟ್ಟದಾಗಿ ಬೈದ ವ್ಯಕ್ತಿ ಇಲ್ಲಿದ್ದಾನೆ. ನನಗೆ ಬೈದರೇ ನಾನು ಸಹಿಸಿಕೊಳ್ಳುವೆ.. ದೇವೇಗೌಡರ ಕುಟುಂಬಕ್ಕೆ ಬೈದ ವ್ಯಕ್ತಿಯ ಪಕ್ಷದೊಂದಿಗೆ ನಾನು ಹೊಂದಾಣಿಕೆ ಆಗಬೇಕಾ? ಇವೂ ಎಲ್ಲಾ ಮಾತನಾಡುತ್ತಾ ಹೋಗಿದ್ರೆ ನಮಗೂ ನೋವು ಆಗುತ್ತದೆʼʼʼ ಎಂದು ಪರೋಕ್ಷವಾಗಿ ಮಾಜಿ ಶಾಸಕ ಕೆ.ಶಿವನಗೌಡ ‌ನಾಯಕ ಅವರನ್ನು ಟೀಕಿಸಿದರು ಕರೆಮ್ಮ

ʻʻಕುಮಾರಣ್ಣಗೆ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಜನರು ನನಗೆ ಗೆಲ್ಲಿಸಿದ್ದಾರೆ. ಜನರ ಭಾವನಾತ್ಮಕ ಸಂಬಂಧಗಳಿಗೆ ನಾನು ಧಕ್ಕೆ ತರಲ್ಲ. ಆ ವ್ಯಕ್ತಿಯಿಂದ ಪಕ್ಷಕ್ಕೂ ಹಾಗೂ ನನಗೂ ಧಕ್ಕೆ ಆಗಿದೆ. ನಮ್ಮ ಕುಟುಂಬದ ಮೇಲೆಯೂ ಹಲ್ಲೆಗಳು ಆಗಿವೆ. ಇವು ಎಲ್ಲವೂ ಮರೆಯಲು ಸಾಧ್ಯವಿಲ್ಲʼʼ ಎಂದು ಕರೆಮ್ಮ ಹೇಳಿದರು.

ʻʻರಾಷ್ಟ್ರೀಯ ಪಕ್ಷದ ಬಗ್ಗೆ ನಾನು ಏನು ಮಾತನಾಡಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಲ್ಲ ಪಕ್ಷಗಳಿಗೂ ಒಂದು ಸಿದ್ಧಾಂತ ಇರುತ್ತದೆ. ಅವರದೇ ಆದ ಸಿದ್ಧಾಂತ ಇರುತ್ತದೆ. ಅವರೂ ಹಾಗೇ ನಡೆದುಕೊಳ್ಳುತ್ತಾರೆ. ಅದಕ್ಕೆ ನನ್ನ ಆಕ್ಷೇಪ ಇಲ್ಲ. ಆದರೆ, ದೇವದುರ್ಗದ ವಿಚಾರದಲ್ಲಿ ರಾಜಿ ಇಲ್ಲ. ಕ್ಷೇತ್ರದ ಜನರು ಮನಸ್ಸಿನ ಭಾವನೆಗಳಿಗೆ ಧಕ್ಕೆ ಆಗದಂತೆ ನಾನು ನಡೆದುಕೊಳ್ಳುವೆʼʼ ಎಂದರು ಶಾಸಕಿ ಕರೆಮ್ಮ.

Exit mobile version