ರಾಯಚೂರು: ಚಲಿಸುತ್ತಿದ್ದ ಲಾರಿಗೆ ಹೈಟೆನ್ಷನ್ ವೈರ್ (Electric shock) ತಗುಲಿ ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಜಯ್ ಕುಮಾರ್ (35) ಮೃತ ದುರ್ದೈವಿ.
ಜಾರ್ಖಂಡ್ ಮೂಲದ ಚಾಲಕ ಅಜಯ್ ಕುಮಾರ್ ಲಾರಿಯಲ್ಲಿ ಹಿಟಾಚಿಯನ್ನು ಸ್ಥಳಾಂತರ ಮಾಡುತ್ತಿದ್ದರು. ಚಲಿಸುತ್ತಿದ್ದ ಲಾರಿಗೆ ಸುಮಾರು 11 ಕೆವಿಯ ಹೈಟೆನ್ಷನ್ ವೈರ್ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಲಾರಿಯು ಏಕಾಏಕಿ ಬೆಂಕಿಯಿಂದ ಹೊತ್ತಿ ಉರಿದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Road Accident : ಅರಕಲಗೂಡಿನಲ್ಲಿ ಭೀಕರ ಅಪಘಾತ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ
ಹೆದ್ದಾರಿಯಲ್ಲಿ ನಿಂತಿದ್ದ ಟೆಂಪೋಗೆ ಬೈಕ್ ಡಿಕ್ಕಿ, ಇಬ್ಬರು ಸಾವು
ತುಮಕೂರು: ಹೆದ್ದಾರಿ ಬದಿ ನಿಂತಿದ್ದ ಮಿನಿ ಟೆಂಪೊಗೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾದ (Road Accident) ಪರಿಣಾಮ, ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ತುಮಕೂರು (tumkur news) ಜಿಲ್ಲೆಯ ಶಿರಾ ತಾಲೂಕಿನ ಮರಳಪ್ಪನಹಳ್ಳಿ ಬ್ರಿಡ್ಜ್ ಬಳಿ ದುರ್ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ನಡೆದಿದ್ದು, ಸವಾರ ಪ್ರಭು ಗೌಡ (28) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕಿನಲ್ಲಿದ್ದ ಮತ್ತೊಬ್ಬ ಆನಂದ್ (30) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ಮೃತರು ಉತ್ತರ ಕರ್ನಾಟಕ ಮೂಲದವರು ಎನ್ನಲಾಗಿದೆ. ಮಿನಿ ಟೆಂಪೋ ಲಾರಿ ಹೆದ್ದಾರಿ ಬದಿ ಟಯರ್ ಪಂಚರ್ ಆಗಿ ನಿಂತಿದ್ದು, ಅದಕ್ಕೆ ಬೈಕ್ ಡಿಕ್ಕಿಯಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿ ಗುದ್ದಿ ಸ್ಕಾರ್ಪಿಯೋ ಚಾಲಕ ಮೃತ್ಯು, ಆ್ಯಸಿಡ್ ಕುಡಿದು ಸಾವು
ವಿಜಯನಗರ: ವಿಜಯನಗರ (vijayanagara news) ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಒಬ್ಬರು ಆಕಸ್ಮಿಕವಾಗಿ ಆ್ಯಸಿಡ್ ಕುಡಿದು ಸಾವಿಗೀಡಾಗಿದ್ದರೆ, ಮತ್ತೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದೆ.
ಕೂಡ್ಲಿಗಿ ತಾಲೂಕಿನಲ್ಲಿ ಎರಡೂ ಪ್ರಕರಣಗಳು ನಡೆದಿವೆ. ಚಿತ್ರದುರ್ಗ ಕಡೆಯಿಂದ ವೇಗವಾಗಿ ಬಂದ ಲಾರಿ, ಸ್ಕಾರ್ಪಿಯೋ ಕಾರಿಗೆ ಗುದ್ದಿದ್ದರಿಂದ ಕಾರು ಚಾಲಕ ಸಂಡೂರು ತಾಲೂಕಿನ ಜಯಕುಮಾರ್ (58) ಎಂಬವರು ಸಾವಿಗೀಡಾಗಿದ್ದಾರೆ.
ಬುಲೆರೋ ಗೂಡ್ಸ್ ವಾಹನದಲ್ಲಿ ತರಕಾರಿ ಸಪ್ಲೈ ಮಾಡುತ್ತಿದ್ದ ರಂಗಸ್ವಾಮಿ (44) ಎಂಬವರು, ಬಾಯಾರಿಕೆ ತಣಿಸಿಕೊಳ್ಳಲೆಂದು ನೀರು ಎಂದು ಭಾವಿಸಿ ತನ್ನದೇ ವಾಹನದಲ್ಲಿದ್ದ ಆ್ಯಸಿಡ್ ಕುಡಿದ ಪರಿಣಾಮ ಸಾವಿಗೀಡಾಗಿದ್ದಾರೆ. ಕೂಡ್ಲಿಯಿಂದ ಕೊಟ್ಟೂರಿಗೆ ತರಕಾರಿ ಸಪ್ಲೈ ಮಾಡಲು ಹೋಗಿದ್ದ ಅವರು ಗೊತ್ತಾಗದೇ ಬಿಸಿಲಿನ ತಾಪಕ್ಕೆ ತಮ್ಮದೇ ವಾಹನದಲ್ಲಿದ್ದ ಆ್ಯಸಿಡ್ ಕುಡಿದಿದ್ದಾರೆ. ಬಳಿಕ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ