ರಾಯಚೂರು: ರಾಯಚೂರು ನಗರದ ಜ್ಯೋತಿ ಕಾಲೋನಿಯ (Raichur Jyothi Colony) ರಿಖಬ್ ಚಂದ್ ಸುಖಾಣಿ ಪ್ರೌಢ ಶಾಲೆಯ (Rikhab Chand sukhani High School) ಬಳಿ ನಡೆದ ವಿದ್ಯಾರ್ಥಿಗಳ ಗ್ಯಾಂಗ್ ವಾರ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಗ್ಯಾಂಗ್ (Gang war in School) ಒಂದನ್ನು ತಂದು ಒಂಬತ್ತನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇದು. ಒಂಬತ್ತನೇ ತರಗತಿಯ ವಿದ್ಯಾರ್ಥಿ ಮೇಲೆ ಚಾಕು, ಗನ್ ಮತ್ತು ಬಟನ್ ಚಾಕುವಿನಿಂದ ಹಲ್ಲೆ ಮಾಡಲಾಗಿರುವ ಈ ಘಟನೆಯ ಹಿಂದೆ ಇರುವುದು ಒಂದು ಲವ್ ಸ್ಟೋರಿ (Love story) ಎಂದರೆ ನಂಬುತ್ತೀರಾ?
ಹೌದು, ಇದು ಪಕ್ಕಾ ಪ್ರೇಮ ಪ್ರಕರಣ. ಒಬ್ಬ ಹುಡುಗಿಯ ವಿಚಾರದಲ್ಲಿ ನಡೆದಿರುವ ಗಲಾಟೆ ಇದು. ಕಾಲೇಜು ಹುಡುಗರ ಮಟ್ಟದಲ್ಲಷ್ಟೇ ನಡೆಯುತ್ತಿದ್ದ ಈ ಹುಡುಗಿ ವಿಚಾರದ ಗಲಾಟೆ ಈಗ ಶಾಲಾ ಮಕ್ಕಳ ಹಂತವನ್ನೂ ತಲುಪಿದ್ದು ಮಾತ್ರ ಭಾರಿ ಅಪಾಯಕಾರಿ.
ರಿಖಬ್ ಚಂದ್ ಸುಖಾಣಿ ಪ್ರೌಢ ಶಾಲೆಯ ಆವರಣದಲ್ಲಿ ಸೋಮವಾರ ಬೆಳಗ್ಗೆ ಕೆಲವು ಹುಡುಗರು ಚಾಕು, ಗನ್, ಬಟನ್ ಚಾಕು ಹಿಡಿದುಕೊಂಡು ಬಂದಿದ್ದರು. ಆವರಣಕ್ಕೆ ಬರುತ್ತಿದ್ದಂತೆಯೇ ಒಂಬತ್ತನೇ ತರಗತಿಯ ಒಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ತಿಳಿಯುತ್ತಿದ್ದಂತೆಯೇ ಪೊಲೀಸರು ಧಾವಿಸಿದ್ದಾರೆ. ಆಗ ಎಲ್ಲ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಅಲ್ಲಿ ಪಿಸ್ತೂಲು, ಡ್ಯಾಗರ್, ಚಾಕುಗಳು ಪತ್ತೆಯಾದವು. ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರೆಲ್ಲ ಶಾಲೆಗೆ ಓಡಿಕೊಂಡೇ ಬಂದಿದ್ದಾರೆ.
ಈ ಪ್ರಕರಣದ ಹಿನ್ನೆಲೆಯನ್ನು ಕೆದಕಿದಾಗ ಕಂಡುಬಂದಿದ್ದೇನೆಂದರೆ, ಇದು ಒಬ್ಬ ಹುಡುಗಿ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ಎನ್ನುವುದು. 7ನೇ ತರಗತಿ ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಪ್ರೀತಿಸಿದಾಕೆಯ ಸಲು
ವಾಗಿ ನಡೆದಿರುವ ಗಲಾಟೆ ಇದು.
ಒಂಬತ್ತನೇ ತರಗತಿಯ ವಿದ್ಯಾರ್ಥಿ ಕೆಲವು ದಿನಗಳ ಹಿಂದೆ ಶಾಲೆಯ ಗೇಟ್ ಬಳಿ ಒಬ್ಬ ಹುಡುಗಿಯ ಜತೆ ಮಾತನಾಡಿದ್ದನಂತೆ. ಆಕೆಯ ಮೇಲೆ ಏಳನೇ ತರಗತಿ ವಿದ್ಯಾರ್ಥಿಯ ಕಣ್ಣಿತ್ತು ಅನಿಸುತ್ತದೆ! ಹೀಗಾಗಿ ಆತ ಸಿಟ್ಟಿಗೆದ್ದಿದ್ದಾನೆ. ಕಳೆದ ಶನಿವಾರ 9ನೇ ತರಗತಿ ವಿದ್ಯಾರ್ಥಿಯನ್ನು ನಿಲ್ಲಿಸಿ ನಮ್ಮ ಹುಡುಗಿ ಜತೆ ಯಾಕೆ ಮಾತನಾಡಿದೆ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಅವರಿಬ್ಬರ ನಡುವೆ ಜಗಳವಾಗಿದೆ.
ಇದೇ ಸಿಟ್ಟನ್ನು ಇಟ್ಟುಕೊಂಡು ಏಳನೇ ತರಗತಿ ವಿದ್ಯಾರ್ಥಿ ತನ್ನ ಏರಿಯಾದ ತನ್ನದೇ ವಯಸ್ಸಿನ ಇತರ ವಿದ್ಯಾರ್ಥಿಗಳ ಬಳಿ ವಿಷಯ ತಿಳಿಸಿದ್ದಾನೆ. ಅವರೆಲ್ಲ ಸೇರಿ 9ನೇ ತರಗತಿಯ ವಿದ್ಯಾರ್ಥಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಸೋಮವಾರ ಬೆಳಗ್ಗೆ 9ನೇ ತರಗತಿ ವಿದ್ಯಾರ್ಥಿ ಶಾಲೆಗೆ ಬರುವಾಗ ತಡೆದು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ. ಇದರೊಂದಿಗೆ ರಾಯಚೂರಿನ ಇತಿಹಾಸದಲ್ಲಿ ಮಕ್ಕಳ ಗ್ಯಾಂಗ್ ವಾರ್ ದಾಖಲಾಯಿತು. ಈಗ ಹಲ್ಲೆಗೆ ಸುಪಾರಿ ಕೊಟ್ಟ ಏಳನೇ ತರಗತಿ ವಿದ್ಯಾರ್ಥಿ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಆಟಿಕೆ ಗನ್ ಎಂದ ಡಿಡಿಪಿಐ
ವಿದ್ಯಾರ್ಥಿಗಳ ಗ್ಯಾಂಗ್ ವಾರ್ ನಡೆದ ರಾಯಚೂರು ಶಾಲೆಗೆ ಜಿಲ್ಲಾ ಡಿಡಿಪಿಐ ಕೆ.ಡಿ ಬಡಿಗೇರ ಭೇಟಿ ನೀಡಿದ್ದು, ವಿದ್ಯಾರ್ಥಿ ಮತ್ತು ಪೊಲೀಸರ ಜೊತೆ ಸಮಾಲೋಚನೆ ನಡೆಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ʻʻಶಾಲೆಯ ಕಾಂಪೌಂಡ್ ಹೊರಗಡೆ ಘಟನೆ ನಡೆದಿದೆ. ಶಿಕ್ಷಕರು ಮತ್ತು ಪೋಷಕರ ಜತೆ ಹೀಗಾಗಲೇ ಸಭೆ ಮಾಡಿದ್ದೇನೆ. ಘಟನೆಯಲ್ಲಿ ಯಾವ ಮಕ್ಕಳಿಗೂ ಗಾಯಗಳಾಗಿಲ್ಲ. ಪೋಷಕರು ಈವರೆಗೂ ಠಾಣೆಗೆ ಲಿಖಿತವಾಗಿ ದೂರು ನೀಡಿಲ್ಲ. ಮಕ್ಕಳ ಕೈಯಲ್ಲಿ ಇದ್ದದ್ದು ಗನ್ ಅಲ್ಲ,ಜಾತ್ರೆಯ ಆಟಿಕೆ ಗನ್ ಅದು. ಪೊಲೀಸರು ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ತಾರೆ. ಶಾಲೆಯ ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಿದ್ದೇನೆ. ಘಟನೆಯ ವಿವರ ಬಗ್ಗೆ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬೈಕ್-ಸೈಕಲ್ ಟಚ್ ಆಗಿದ್ದಕ್ಕೆ ಗಲಾಟೆ ಎಂದ ಗಾಯಾಳು ಬಾಲಕನ ತಂದೆ
ಈ ನಡುವೆ, ಗಾಯಾಳು, ಒಂಬತ್ತನೇ ತರಗತಿ ವಿದ್ಯಾರ್ಥಿಯ ತಂದೆ ಈರಣ್ಣ ಅವರು ಮಾಧ್ಯಮಗಳ ಜತೆ ಮಾತನಾಡಿ, ಕಳೆದ 4-5 ತಿಂಗಳಿಗಳಿಂದ ಮಕ್ಕಳೆಲ್ಲ ಸೈಕಲ್ ತಗೊಂಡು ಹೋಗ್ತಿದ್ದಾರೆ. ನಮ್ಮ ಹುಡುಗ ಸ್ನಾಕ್ಸ್ ತಿನ್ನಲೆಂದು ಕಿರಾಣಿ ಅಂಗಡಿಗೆ ಬಂದಿದ್ದ. ಆಗ ಸೈಕಲ್ ಮತ್ತು ಬೈಕ್ ಟಚ್ ಆಗಿದೆ. ಗಲಾಟೆ ವೇಳೆ ಯಾರೋ ತಕ್ಷಣ ಚಾಕು ತೆಗೆದುಕೊಂಡು ಹೊಡಿಯೋಕೆ ಬಂದಿದ್ದಾನೆ. ಗಲಾಟೆಯಲ್ಲಿ ಅವರಲ್ಲಿದ್ಧ ಚಾಕು ಹೊರಗಡೆ ಬಿದ್ವಂತೆ. ಶಾಲೆಗೆ ವೆಪನ್ ತಂದ ಹುಡುಗನ ಹೆಸರು ನಮಗೆ ಗೊತ್ತಿಲ್ಲ.. ಆ ಹುಡುಗ 7ನೇ ಕ್ಲಾಸ್ ಓದ್ತಾನೆ, ನನ್ನ ಮಗ 9ನೇ ಕ್ಲಾಸ್ ಓದ್ತಾನೆ. ಹಿಂದೆ ಅವರಿಬ್ಬರ ನಡುವೆ ಯಾವುದೂ ಗಲಾಟೆಗಳು ಆಗಿರಲಿಲ್ಲ. ಮುಂಚೆ ಅವರಿಬ್ಬರೂ ಫ್ರೆಂಡ್ಸು ಎಂದು ಹೇಳಿದರು.
ಇದನ್ನೂ ಓದಿ: Love story : ಪಿಯು ಹುಡುಗನ ಜತೆ ಹೈಸ್ಕೂಲ್ ಟೀಚರ್ ಲವ್!; ಭಾವಿ ಗಂಡನ ಕೈಲೇ ಸಿಕ್ಕಿಬಿದ್ರು!
ಸ್ಕೂಲ್ ನಲ್ಲಿ ಮೇಡಂ ಅವರು ಮಗನ ಟಿಸಿ ತಗೊಂಡ್ ಹೋಗಿ ಅಂತಾರೆ. ನನ್ನ ಮಗನ ಹೊಟ್ಟೆಗೆ ಪರಚಿದ್ದಾರೆ. ಕೈಗೆ ಚೂರಿ ಏಟು ಬಿದ್ದಿದೆ. ನಮ್ಮ ಹುಡುಗ ಹಾಗೇನೂ ಇಲ್ಲ ಎಂದು ಶಾಲೆಯ ಪ್ರಿನ್ಸಿಪಾಲ್‌ಗೆ ಹೇಳಿ ಎಂದು ಮಾಧ್ಯಮಗಳ ಮುಂದೆ ಅಂಗಲಾಚಿದರು.
ಇದನ್ನೂ ಓದಿ: Double Murder : ಹೊಸ ವರ್ಷವೇ ಡಬಲ್ ಮರ್ಡರ್; ಕ್ಷುಲ್ಲಕ ಕಾರಣಕ್ಕೆ ಪ್ರಾಣವೇ ಹೋಯ್ತು!