Site icon Vistara News

Heart Attack: ‌ಪಾಠ ಮಾಡಿ ಬಂದು ಕಚೇರಿಯಲ್ಲಿ ಕುಳಿತಲ್ಲೇ ಹೃದಯಾಘಾತ; ಶಿಕ್ಷಕ ಸಾವು

Heart Attack teacher dead

ರಾಯಚೂರು: ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳು ಹೃದಯಾಘಾತಕ್ಕೀಡಾಗಿ (Heart Attack) ಸಾವನ್ನಪ್ಪಿದ್ದನ್ನು ಗಮನಿಸಿದ್ದೇವೆ. ಈಗ ಶಿಕ್ಷಕರೊಬ್ಬರು ಕುಳಿತ ಕುರ್ಚಿಯಲ್ಲೇ (School teacher death) ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆ (Raichur News) ಮಸ್ಕಿ ತಾಲೂಕಿನ ಗದ್ರಟಗಿ ಸರ್ಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ (57) ಎಂಬವರೇ ಹೃದಯಾಘಾತಕ್ಕೆ ಬಲಿಯಾದವರು.

ಅವರು ಬೆಳಗ್ಗೆ ಮೊದಲ ತರಗತಿ ಪಾಠ ಮುಗಿಸಿ ಕಚೇರಿಗೆ ಬಂದು ಕುಳಿತಿದ್ದರು. ಮುಂದೆ ಶಾಲೆಗೆ ಸಂಬಂಧಿಸಿದ ಯಾವುದೋ ದಾಖಲೆ ತೆಗೆದು ಬರೆಯಲು ಆರಂಭಿಸುತ್ತಿದ್ದಂತೆಯೇ ಅಲ್ಲೇ ಹೃದಯ ಸ್ತಬ್ಧಗೊಂಡಿದೆ. ಹೀಗಾಗಿ ಕುಳಿತ ಕುರ್ಚಿಯಲ್ಲಿ ಬರೆಯುತ್ತಿದ್ದ ಸ್ಥಿತಿಯಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಮೂಲತಃ ರಾಣೆಬೆನ್ನೂರಿನವರಾಗಿರುವ ಮೃತ ಶಿಕ್ಷಕ ಸುರೇಶ್ ಅವರು ಶಾಲೆಯಲ್ಲಿ ಒಬ್ಬ ಒಳ್ಳೆಯ ಶಿಕ್ಷಕನೆಂಬ ಗೌರವಕ್ಕೆ ಪಾತ್ರರಾಗಿದ್ದರು. ಜತೆಗೆ ಊರಿನವರ ನಡುವೆಯೂ ಪ್ರೀತಿ ಸಂಪಾದಿಸಿದ್ದರು. ಆದರೆ, ಇದೀಗ ವಿಧಿ ಅವರನ್ನು ಈ ರೀತಿಯಾಗಿ ಬಲಿ ಪಡೆದಿದೆ.

ಮುಖ್ಯ ಶಿಕ್ಷಕ ಸುರೇಶ್‌ ಅವರ ನಿಧನವನ್ನು ಅರಗಿಸಿಕೊಳ್ಳಲಾಗದ ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಕೂಡಾ ತೀವ್ರವಾಗಿ ಬೇಸರಗೊಂಡಿದ್ದಾರೆ. ಮೃತ ಶಿಕ್ಷಕ ಸುರೇಶ್ ಅವರಿಗೆ ಪತ್ನಿ ಮತ್ತು ಮೂವರು ಪುತ್ರರಿದ್ದಾರೆ.

ಉಡುಪಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ದಾರುಣ ಮೃತ್ಯು

ಅಫ್ಕಾರ್‌ ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಅಪ್ಕಾರ್‌ (17) ಎಂಬ ಬಾಲಕ ಕಳೆದ ವಾರ ಹೃದಯಾಘಾತದಿಂದ ಮೃತಪಟ್ಟಿದ್ದ. ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಸೇಶನ್ ಆಫ್ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ ಅಫ್ಕಾರ್‌ಗೆ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಡಿಸೆಂಬರ್ 6ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ. ಕಳೆದ 18ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ ಅಫ್ಕಾರ್‌ಗೆ ಊರಿಗೆ ಹಿಂದಿರುಗಿದ ಸಂದರ್ಭ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದ.

ಇದನ್ನೂ ಓದಿ : Heart Failure: ʼಆರೋಗ್ಯದ ಬಗ್ಗೆ ಕಾಳಜಿ ವಹಿಸಿʼ ಎನ್ನುತ್ತಾ ವೇದಿಕೆ ಮೇಲೆ ಕುಸಿದು ಪ್ರೊಫೆಸರ್‌ ಸಾವು

ಕುಸಿದು ಬಿದ್ದವಳ ಹೃದಯ ಬಡಿತವೇ ನಿಂತಿತ್ತು!

ಚಿಕ್ಕಮಗಳೂರಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಳು. ಕಳೆದ ಬುಧವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿತ್ತು. 13 ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟ ಬಾಲಕಿಯಾಗಿದ್ದಾಳೆ. ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಶಾಲೆಗೆ ತೆರಳುತ್ತಿದ್ದಾಗ ಹಠಾತ್‌ ಆಗಿ ಕುಸಿದು ಬಿದ್ದಿದ್ದಳು. ಹೀಗಾಗಿ ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ. ಬಳಿಕ ಪರೀಕ್ಷೆ ನಡೆಸಿದ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಹೃದಯಾಘಾತವಾಗಿದೆ ಎಂದು ಘೋಷಿಸಿದ್ದಾರೆ.

Exit mobile version