ರಾಯಚೂರು: ಜಮೀನಿಗೆ ತೆರಳುತ್ತಿದ್ದ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹಿಡಿದು ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ. ರಾಯಚೂರಿನ ದೇವದುರ್ಗ ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಮೂವರ ಮೇಲೆ ಚಿರತೆ (Leopard attack) ದಾಳಿ ನಡೆಸಿತ್ತು.
ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವೇಳೆ ಚಿರತೆ ಸೆರೆ ಸಿಗದ ಹಿನ್ನೆಲೆಯಲ್ಲೇ ಅಖಾಡಕ್ಕೆ ಇಳಿದ ಗ್ರಾಮಸ್ಥರೇ ಚಿರತೆ ಮೇಲೆ ದಾಳಿ ಮಾಡಿದ್ದರು. ಅರಣ್ಯ ಅಧಿಕಾರಿಗಳ ಎದುರೇ ಚಿರತೆಯನ್ನು ಕೊಂದು ಹಾಕಿದ್ದರು. ಇತ್ತ ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರನ್ನು ನಿಯಂತ್ರಿಸಲು ಆಗದೆ ಪೊಲೀಸರು ಹರಸಾಹಸ ಪಟ್ಟರು. ಮಾತ್ರವಲ್ಲದೇ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.
ಚಿರತೆಯನ್ನು ಕೊಂದು ಪಶು ಆಂಬ್ಯುಲೆನ್ಸ್‌ಗೆ ತಂದು ಹಾಕಿದರು. ಅರಣ್ಯ ಹಾಗೂ ಪೊಲೀಸರ ಅಧಿಕಾರಿ ಮುಂದೆಯೇ ಚಿರತೆ ಬಲಿಯಾಯಿತು. ಚಿರತೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಅಸಹಾಯಕರಾಗಿದ್ದರು. ಸಂಜೆಯಾಗುತ್ತಿದ್ದಂತೆ ರೊಚ್ಚಿಗೆದ್ದ ಜನರು ಚಿರತೆಯನ್ನು ಕೊಂದಿದ್ದಾರೆ. ಸದ್ಯ ದೇವದುರ್ಗ ತಾಲೂಕು ಪಶು ಆಸ್ಪತ್ರೆಯಲ್ಲಿ ಚಿರತೆ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ
ಚಿರತೆ ದಾಳಿಗೆ ಮೂವರು ಗಂಭೀರ
ಕಾಡುಪ್ರಾಣಿಗಳ ಹಾವಳಿ (Wild Animal Attack) ಹೆಚ್ಚಾಗಿದ್ದು, ಜನ-ಸಾಮಾನ್ಯರು ಆತಂಕದಲ್ಲೇ ಓಡಾಡುವಂತಾಗಿದೆ. ಆಹಾರ ಅರಸಿ ನಾಡಿಗೆ ಕಾಲಿಡುತ್ತಿರುವ ಪ್ರಾಣಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಜತೆಗೆ ಸಾಕುಪ್ರಾಣಿಗಳನ್ನು ಕೊಂದು ಎತ್ತಿಕೊಂಡು ಹೋಗುತ್ತಿವೆ. ಜು.7ರ ಮುಂಜಾನೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಮೂವರ ಮೇಲೆ ಚಿರತೆ (Leopard attack) ದಾಳಿ ನಡೆಸಿತ್ತು.
ಚಿರತೆ ದಾಳಿಯಿಂದಾಗಿ ಮೂವರು ಗಂಭೀರ ಗಾಯಗೊಂಡಿದ್ದರು. ಮಲ್ಲಣ್ಣ, ರಂಗನಾಥ್, ಹನಮೇಶ ಕಮದಾಳ ಗಾಯಾಳುಗಳು. ಗಂಭೀರ ಗಾಯಗೊಂಡಿದ್ದ ಗಾಯಾಳುಗಳನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಮೂವರು ಜಮೀನಿಗೆ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ಚಿರತೆಯು ಮೂವರ ಮೇಲೂ ಎರಗಿ ದಾಳಿ ಮಾಡಿ ಗಾಯಗೊಳಿಸಿತ್ತು. ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿತ್ತು. ಇನ್ನೂ ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಮದಾಳು,ಯರಮಸಾಳ, ಜೇರಬಂಡಿ, ಗುಂಡಗುರ್ತಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಸೆರೆಹಿಡಿಯುವಂತೆ ಜನರು ಒತ್ತಾಯಿಸಿದ್ದರು. ಆದರೆ ಯಾವಾಗ ಕಣ್ಮುಂದೆ ಇದ್ದ ಚಿರತೆಯನ್ನು ಸೆರೆಹಿಡಿಯಲು ಅಧಿಕಾರಿಗಳು ವಿಫಲರಾದರೂ, ರೊಚ್ಚಿಗೆದ್ದ ಗ್ರಾಮಸ್ಥರು ಚಿರತೆಯನ್ನು ಹೊಡೆದು ಕೊಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ