ರಾಯಚೂರು: ರಾಯಚೂರಿನ (Raichur news) ಹಟ್ಟಿ ಪಟ್ಟಣದಲ್ಲಿ ಮಹಿಳೆಯೊಬ್ಬರ ಭೀಕರ ಹತ್ಯೆ (Murder Case, woman murder) ಮಾಡಲಾಗಿದ್ದು, ಶವವನ್ನು ಸುಟ್ಟುಹಾಕಲಾಗಿದೆ. ತಡರಾತ್ರಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಮುಂಜಾನೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗಲೂ ಶವ ಬೆಂಕಿಯಲ್ಲಿ ಉರಿಯುತ್ತಿದ್ದುದು ಕಂಡುಬಂತು.
ಮಂಜುಳಾ (45) ಕೊಲೆಯಾದ ದುರ್ದೈವಿ ಮಹಿಳೆ. ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಇವರನ್ನು ಹತ್ಯೆಗೈದು ಸುಟ್ಟು ಹಾಕಿದ್ದಾರೆ. ಮನೆಯಿಂದ 100 ಮೀಟರ್ ದೂರದಲ್ಲಿ ಕೃತ್ಯ ನಡೆದಿದೆ. ಹತ್ಯೆ ಬಳಿಕ ಮೃತದೇಹವನ್ನು ಹಂತಕರು ಸುಟ್ಟು ಹಾಕಿದ್ದಾರೆ. ಮನೆಯಿಂದ ಹೊರಗೆ ಕರೆಸಿ ಕೊಲೆ ಮಾಡಿರುವ ಶಂಕೆ ಇದೆ. ಬೆಳಗಿನ ಜಾವ 2-3 ಗಂಟೆಗೆ ನಡೆದಿರಬಹುದು ಎನ್ನಲಾಗಿದೆ.
ಮಂಜುಳಾ ಅವರು ಹಟ್ಟಿ ಚಿನ್ನದ ಗಣಿ ಕಂಪನಿಯ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು. ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅವರು ಹಟ್ಟಿ ಪಟ್ಟಣದ ಜಿ.ಆರ್.ಕಾಲೋನಿ ಮನೆ ನಂ 45/6ರಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಸ್ಥಳಕ್ಕೆ ಹಟ್ಟಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ನೇಹಿತನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ
ಕಾರವಾರ: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಬೆಳೆಸಿದ ಸ್ನೇಹಿತನ ಕಿರುಕುಳದಿಂದ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳದಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳದ ಹಾಡವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನೇತ್ರಾ ಗೋವಾಳಿ(24) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಿತನಾಗಿದ್ದ ಗೋವರ್ಧನ್ ಮೊಗೇರ್ ಎಂಬಾತ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದೊಂದು ವರ್ಷದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಗೋವರ್ಧನ್ ಈಕೆಗೆ ಪರಿಚಯವಾಗಿದ್ದ. ನೇತ್ರಾಳೊಂದಿಗೆ ಆತ್ಮೀಯವಾಗಿ ಸ್ನೇಹ ಬೆಳೆಸಿದ್ದ ಈತ ಬಳಿಕ ಪ್ರೀತಿಸುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಪ್ರೀತಿಗೆ ಒಪ್ಪದಿದ್ದಾಗ, ತಾನು ಖರ್ಚು ಮಾಡಿದ್ದ ಹಣ ನೀಡುವಂತೆ ಪೀಡಿಸಲು ಆರಂಭಿಸಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಅಶ್ಲೀಲ ಪೋಟೋಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ.
ಈ ಕಿರುಕುಳದಿಂದ ಬೇಸತ್ತ ನೇತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಗೋವರ್ಧನ್ ಕಾರಣ ಎಂದು ನೇತ್ರಾ ತಂದೆಯಿಂದ ಗೋವರ್ಧನ್ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.