Site icon Vistara News

Physical Abuse : ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿದ ಕಾಮುಕ

Physical Abuse in raichur

ರಾಯಚೂರು: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ (Physical Abuse) ಎಸಗಿ ಬಳಿಕ ಕೊಲೆಗೆ ಯತ್ನಿಸಿರುವ ಅಮಾನವೀಯ ಘಟನೆ ನಡೆದಿದೆ. ರಾಯಚೂರಿನ ಲಿಂಗಸುಗೂರು ತಾಲೂಕಿನ ಗುಂಡಸಾಗರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಬಾಲಕಿಯೊಬ್ಬಳು ಬಹಿರ್ದೆಸೆಗೆಂದು ಹೋಗಿದ್ದಳು. ಇವಳನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಕಾಮುಕ ಬಸವರಾಜ ಎಂಬಾತ ಅತ್ತಿಂದಿತ್ತ ಕಣ್ಣಾಡಿಸಿದ್ದ. ಯಾರು ಇಲ್ಲದೆ ಇರುವುದನ್ನು ತಿಳಿದು ಏಕಾಏಕಿ ಹಿಂದಿನಿಂದ ಬಂದು ಬಾಲಕಿಯನ್ನು ಗಟ್ಟಿಯಾಗಿ ಹಿಡಿದು ಬಾಯಿಗೆ ಬಟ್ಟೆಯನ್ನು ತುರುಕಿದ್ದಾನೆ. ಆತನ ಮುಷ್ಠಿಯಿಂದ ಬಿಡಿಸಿಕೊಳ್ಳಲು ಆಗದೇ ಇದ್ದಾಗ ಬಾಲಕಿಯ ಅಸಹಾಯಕತೆಯನ್ನೇ ದುರುಪಯೋಗ ಮಾಡಿಕೊಂಡು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರ ಎಸಗಿದ ಬಳಿಕ ಸಿಕ್ಕಿ ಬೀಳುವ ಭೀತಿಯಲ್ಲಿ ಕಾಮುಕ ಬಸವರಾಜ, ಅಸ್ವಸ್ಥಳಾಗಿದ್ದ ಬಾಲಕಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾನೆ. ಆದರೆ ಅದ್ಹೇಗೋ ಬಾಲಕಿ ಆತನಿಂದ ತಪ್ಪಿಸಿಕೊಂಡು ಬಂದಿದ್ದು, ನಡೆದಿದ್ದ ಎಲ್ಲ ಘಟನೆಯನ್ನು ಪೋಷಕರಿಗೆ ಹೇಳಿದ್ದಾಳೆ.

ಕೂಡಲೇ ಪೋಷಕರು ಸಂತ್ರಸ್ತೆ ಜತೆಗೂಡಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಲಿಂಗಸಗೂರು ಪೊಲೀಸರು ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಅತ್ಯಾಚಾರಿ ಆರೋಪಿ ಬಸವರಾಜ ದ್ಯಾವಪ್ಪ ಆದಾಪುರನನ್ನು ಅರೆಸ್ಟ್‌ ಮಾಡಿದ್ದಾರೆ. ಸದ್ಯ ಈ ಸಂಬಂಧ ಲಿಂಗಸಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ; ಇಂದು ಮತ್ತೊಂದು ದೂರು ದಾಖಲು?

ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಕೊಂದ ಟ್ರಕ್‌ ಡ್ರೈವರ್;‌ ಭೀಕರ ವಿಡಿಯೊ ಇಲ್ಲಿದೆ

ಹೈದರಾಬಾದ್:‌ ತೆಲಂಗಾಣದಲ್ಲಿ ಟ್ರಕ್‌ ಚಾಲಕನೊಬ್ಬ 6 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿದ್ದಾನೆ. ತೆಲಂಗಾಣದ (Telangana) ಪೆದ್ದಪಲ್ಲಿ ಜಿಲ್ಲೆಯಲ್ಲಿ ಗುರುವಾರ (ಜೂನ್‌ 13) ರಾತ್ರಿ ಭೀಕರ ಕೃತ್ಯ ನಡೆದಿದೆ. ಕಂದಮ್ಮನನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು ಕೊಂದು ನಿರ್ಜನ ಪ್ರದೇಶದಲ್ಲಿ ಎಸೆದ ದುರುಳನನ್ನು ಬಲರಾಮ್‌ ಎಂದು ಗುರುತಿಸಲಾಗಿದೆ. ಈತನು ಉತ್ತರ ಪ್ರದೇಶದವನಾಗಿದ್ದು, ಟ್ರಕ್‌ ಚಾಲಕನಾಗಿ (Truck Driver) ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಬಾಲಕಿಯು ತಾಯಿ ಜತೆ ರೈಸ್‌ ಮಿಲ್‌ ಒಂದರ ಬಳಿ ಮಲಗಿದ್ದರು. ಬಾಲಕಿಯ ತಾಯಿಯು ರೈಸ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲ ಕಾರ್ಮಿಕರು ಮಿಲ್‌ ಬಳಿಯೇ ಮಲಗಿದ್ದರು. ಇದೇ ವೇಳೆ, ಕಾಮುಕ ಟ್ರಕ್‌ ಚಾಲಕನು ಯಾರಿಗೂ ಎಚ್ಚರವಾಗದಂತೆ ಬಾಲಕಿಯನ್ನು ಹೊತ್ತುಕೊಂಡು ಹೋಗಿದ್ದಾನೆ. ಬಾಲಕಿ ಕೂಡ ನಿದ್ದೆಯಲ್ಲಿದ್ದ ಕಾರಣ ಆಕೆ ಕಿರುಚಾಡಿಲ್ಲ. ಮೆಲ್ಲಗೆ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತುಕೊಂಡು ಹೋದ ಆತ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.

ಮಧ್ಯರಾತ್ರಿ ಬಾಲಕಿಯ ತಾಯಿಗೆ ಎಚ್ಚರವಾಗಿದೆ. ಪಕ್ಕದಲ್ಲಿ ಮಲಗಿದ್ದ ಮಗಳು ಕಾಣಿಸದಿದ್ದಾಗ ಎಲ್ಲ ಕಾರ್ಮಿಕರನ್ನು ಎಬ್ಬಿಸಿದ್ದಾರೆ. ಕೂಡಲೇ ಎಲ್ಲ ಕಾರ್ಮಿಕರು ತಡ ರಾತ್ರಿಯೇ ಬಾಲಕಿಗಾಗಿ ಶೋಧ ನಡೆಸಿದ್ದಾರೆ. ಆಗ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಇನ್ನಷ್ಟು ಕಾರ್ಮಿಕರು ಜತೆಗೂಡಿ ರಾತ್ರಿ ದುಷ್ಟನ ಶೋಧಕ್ಕಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆಗ ಟ್ರಕ್‌ ಚಾಲಕನು ಕಾರ್ಮಿಕರ ಕೈಗೆ ಸಿಕ್ಕಿದ್ದಾನೆ. ಆತನಿಗೆ ಧರ್ಮದೇಟು ಕೊಟ್ಟ ಕಾರ್ಮಿಕರು, ಮನಸೋಇಚ್ಛೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಲರಾಮ್‌ ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಲರಾಮ್‌ನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದಲ್ಲಿ 21ವರ್ಷದ ಯುವಕನೊಬ್ಬ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸೆದು, ಕೊಲೆ ಮಾಡಿದ್ದ. ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗೌರವ್‌ ಅಲಿಯಾಸ್‌ ಕುಶಾಲ್‌ ಎಂಬ ಯುವಕ ಪುಟ್ಟ ಬಾಲಕಿಯ ಮೇಲೆ ಕ್ರೌರ್ಯ ಮೆರೆದಿದ್ದ. ಬಳಿಕ ಉಸಿರುಗಟ್ಟಿಸಿ ಕೊಂದಿದ್ದ. ಇದಕ್ಕೂ ಮುನ್ನ ಗೌರವ್‌ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡಿದ್ದ. ಅದನ್ನು ನೋಡಿದ ನಂತರ ಆತನಿಗೆ ತನ್ನ ಮೇಲೆ ನಿಯಂತ್ರಣ ಇಲ್ಲದಂತಾಗಿತ್ತು. ಹೀಗಾಗಿ ಅವನು ಮನೆಯ ಹೊರಗೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ತನ್ನ ಕೃತ್ಯ ಎಲ್ಲಿ ಬಯಲಾಗುತ್ತದೋ ಎಂಬ ಭಯದಲ್ಲಿ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version