Site icon Vistara News

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Raichur Lok Sabha Constituency

Raichur Lok Sabha Constituency: Tough Fight Between Raja Amareshwara Naik And G Kumar Nayak

ರಾಯಚೂರು: ಭತ್ತದ ಜಿಲ್ಲೆಯಾದ ರಾಯಚೂರಿನಲ್ಲಿ ಲೋಕಸಭೆ ಚುನಾವಣೆ (Raichur Lok Sabha Constituency) ಸಮರವು ಮಹತ್ವ ಪಡೆದಿದ್ದು, ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ (Raja Amareshwara Naik) ಹಾಗೂ ಕಾಂಗ್ರೆಸ್‌ನ ಜಿ. ಕುಮಾರ್‌ ನಾಯಕ್‌ (G Kumar Nayak) ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ರಾಜಾ ಅಮರೇಶ್ವರ್‌ ನಾಯಕ್‌ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಅವರು ಖಾತೆ ತೆರೆಯುವ ಉತ್ಸಾಹದಲ್ಲಿದ್ದಾರೆ.

ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮದ ಬಲವಿದೆ. ಹಲವು ಅಭಿವೃದ್ಧಿ ಕಾಮಗಾರಿಗಳ ಬಲ ಇದ್ದರೂ, ಮೂಲ ಸೌಕರ್ಯ ಒದಗಿಸುವ ವಿಚಾರದಲ್ಲಿ ಸಂಸದ ಹಿಂದೆ ಬಿದ್ದಂತೆ ಕಾಣಿಸುತ್ತಿದೆ. ರೈತರ ಆಕ್ರೋಶವೂ ಅವರ ವಿರುದ್ಧ ಇದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮತದಾರರು ರಾಷ್ಟ್ರ ಮಟ್ಟದ ಚಿಂತನೆಯೊಂದಿಗೆ ವೋಟು ಹಾಕುವುದರಿಂದ ಅಮರೇಶ್ವರ ನಾಯಕ್‌ ಅವರಿಗೆ ವರದಾನವಾಗುವ ಸಾಧ್ಯತೆ ಇದೆ.

ರಾಜಾ ಅಮರೇಶ್ವರ ನಾಯಕ್

ಇನ್ನು, 1990ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಜಿ. ಕುಮಾರ್‌ ನಾಯಕ್‌ ಅವರು ನಿವೃತ್ತಿ ಹೊಂದಿದ್ದು, ಈಗ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸುವ ತವಕದಲ್ಲಿದ್ದಾರೆ. 1999ರಿಂದ 2002 ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್‌ ನಾಯಕ್‌ ಅವರಿಗೆ ಜಿಲ್ಲೆಯ ಜತೆ ಒಡನಾಟವಿದೆ. ಐಎಎಸ್‌ ಅಧಿಕಾರಿಯಾಗಿದ್ದರು ಎಂಬ ಸಾಫ್ಟ್‌ ಕಾರ್ನರ್‌, ಯುವಕರ ಬೆಂಬಲವು ಅವರ ಜತೆಗಿದೆ. ಹಾಗಾಗಿ, ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ್‌ ಹಾಗೂ ಕುಮಾರ್‌ ನಾಯಕ್‌ ಮಧ್ಯೆ ಪೈಪೋಟಿ ಅಂತೂ ಇದೆ. ‌

ಜಿ ಕುಮಾರ್‌ ನಾಯಕ್

2019, 2014ರಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಜಾ ಅಮರೇಶ್ವರ್‌ ನಾಯಕ್‌ ಅವರು ಕಾಂಗ್ರೆಸ್‌ನ ಬಿ.ವಿ. ನಾಯಕ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ರಾಜಾ ಅಮರೇಶ್ವರ್‌ ನಾಯಕ್‌ ಅವರು 1.17 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ವಿ. ನಾಯಕ್‌ ಅವರು ಬಿಜೆಪಿಯ ಶಿವನಗೌಡ ನಾಯಕ್‌ ವಿರುದ್ಧ ಕೇವಲ 1,499 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2019ರಲ್ಲಿ ರಾಜಾ ಅಮರೇಶ್ವರ್‌ ನಾಯಕ್‌ ಅವರಿಗೆ ಮೋದಿ ಅಲೆಯು ವರದಾನವಾಗಿತ್ತು.

ಮತದಾರರ ಸಂಖ್ಯೆ

ಪುರುಷರು9.55 ಲಕ್ಷ
ಮಹಿಳೆಯರು9.71 ಲಕ್ಷ
ಲಿಂಗತ್ವ ಅಲ್ಪಸಂಖ್ಯಾತರು367
ಒಟ್ಟು19.28 ಲಕ್ಷ

1957ರಿಂದ 2019ರ ಅವಧಿಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ 17 ಬಾರಿ ಚುನಾವಣೆ ನಡೆದಿದೆ. 17ರಲ್ಲಿ 13 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ಎರಡು ಬಾರಿ ಬಿಜೆಪಿ, ಒಮ್ಮೆ ಸ್ವತಂತ್ರ ಪಕ್ಷ ಹಾಗೂ ಒಮ್ಮೆ ಜೆಡಿಎಸ್‌ ಅಭ್ಯರ್ಥಿಯು ಗೆಲುವು ಸಾಧಿಸಿದ್ದಾರೆ.

ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿಯ ಮೂರು, ರಾಯಚೂರು ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಐದರಲ್ಲಿ ಕಾಂಗ್ರೆಸ್‌, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಭಾವವೂ ಇರುವುದು ಮೈತ್ರಿ ಪಕ್ಷವಾದ ಬಿಜೆಪಿಗೆ ಹೆಚ್ಚಿನ ಅನುಕೂಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bidar Lok Sabha Constituency: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಹಳೇ ಬೇರು Vs ಹೊಸ ಚಿಗುರು; ಖೂಬಾ, ಖಂಡ್ರೆ ಕದನದಲ್ಲಿ ಜಯ ಯಾರಿಗೆ?

Exit mobile version