ರಾಯಚೂರು: ಪ್ರೀತಿ ಎಂಬ ಎರಡಾಕ್ಷರಕ್ಕೆ ಪ್ರೇಮಿಗಳು ಏನೆಲ್ಲ ಯಡವಟ್ಟು ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.. ಪ್ರಿಯಕರನಿಗಾಗಿ ಚಿನ್ನ ಕದ್ದ ಯುವತಿ, ಇದೀಗ ಹೆತ್ತವರನ್ನೇ ಕಳೆದುಕೊಂಡು ಆಸ್ಪತ್ರೆ ಪಾಲಾಗಿದ್ದಾಳೆ. ಒಂದೇ ಕುಟುಂಬದ ಮೂವರು ರೈಲಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ತಂದೆ-ತಾಯಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮಗಳು ಗಂಭೀರ ಗಾಯಗೊಂಡಿದ್ದಾಳೆ. ರಾಯಚೂರು ಜಿಲ್ಲೆಯ ಯರಮರಸ್ ಹೊರವಲಯದಲ್ಲಿ ಘಟನೆ ನಡೆದಿದೆ.
ಸಮೀರ್ ಅಹ್ಮದ್ (44), ಜುಲ್ಲಾಕಾ ಬೇಗಂ(40) ದಂಪತಿ ಮೃತ ದುರ್ದೈವಿಗಳು. ಗಂಭೀರ ಗಾಯಗೊಂಡಿದ್ದ ಮೆಹಾಮುನ್ (21) ಎಂಬಾಕೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Water Crisis : ಬೆಂಗಳೂರಿಗರೇ ಭಯ ಬೇಡ; ಕುಡಿಯುವ ನೀರಿನ ಕೊರತೆ ಇಲ್ಲ, ಆದರೆ ..
ಅಂದಹಾಗೇ 21 ವರ್ಷದ ಮೆಹಾಮುನ್ ಸರ್ಫರಾಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅವನೊಟ್ಟಿಗೆ ಎಲ್ಲಾದರೂ ದೂರ ಹೋಗಿ ಜೀವನ ಮಾಡಬೇಕೆಂದು ನಿರ್ಧರಿಸಿದ್ದಳು. ಇದಕ್ಕಾಗಿ ಅವಳು ಅಡ್ಡದಾರಿಯನ್ನು ಹಿಡಿದಿದ್ದಳು. ರಾಯಚೂರು ನಗರದಲ್ಲಿ ವಾಸವಿದ್ದ ಮಹಿಮ್ಮುದ್ ಹುಸೇನ್ ಎಂಬುವವರ ಮಗನಿಗೆ ಮೆಹಾಮುನ್ ಟ್ಯೂಷನ್ ಮಾಡುತ್ತಿದ್ದಳು.
ಇತ್ತೀಚೆಗೆ ಮಹಿಮ್ಮದ್ ಹುಸೇನ್ ಮನೆಯಲ್ಲಿ ಡೈಮಂಡ್ ನಕ್ಲೇಸ್ ಹಾಗೂ ಚಿನ್ನವು ಕಳ್ಳತನವಾಗಿತ್ತು. ಹೀಗಾಗಿ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಟ್ಯೂಷನ್ ಮಾಡುವ ನೆಪದಲ್ಲೆ ಮೆಹಾಮುನ್ ಚಿನ್ನಾಭರಣವನ್ನು ಕದ್ದಿದ್ದಳು. ಯಾವಾಗ ಪೊಲೀಸರು ವಿಚಾರಣೆ ಮಾಡಲು ಶುರು ಮಾಡಿದರೋ, ಆಗ ಬೆದರಿದ ಮೆಹಾಮುನ್ ತಾನು ಕದ್ದ ಚಿನ್ನವನ್ನು ಯಾರಿಗೂ ತಿಳಿಯದೇ ವಾಪಸ್ ಕಿಟಿಕಿ ಮೂಲಕ ಎಸೆದಿದ್ದಳು. ಆದರೆ ಅದೃಷ್ಟ ಕೈಕೊಟ್ಟಿತ್ತು, ಆಕೆ ಚಿನ್ನಾಭರಣವನ್ನು ಎಸೆದಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಮೆಹಾಮುನ್‌ನನ್ನು ಕರೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಳು. ಕದ್ದ ಚಿನ್ನದಲ್ಲಿ ಒಂದು ಬ್ರೆಸ್ಲೈಟ್ ಮಿಸ್ಸಿಂಗ್ ಆಗಿತ್ತು. ಇದನ್ನೂ ಮೆಹಾಮುನ್ ತಾನು ಪ್ರೀತಿಸುತ್ತಿದ್ದ ಸರ್ಫಾರಾಜ್‌ಗೆ ಕೊಟ್ಟಿದ್ದಳು. ಇತ್ತ ಮಹಿಮ್ಮದ್ ಹುಸೇನ್ ಈ ಹಿಂದೆ ಕದ್ದಿರುವ ಎಲ್ಲ ಚಿನ್ನವನ್ನು ವಾಪಸ್ ಕೊಡುವಂತೆ ಹೇಳಿ, ಟೈಂಲೈನ್ ಕೊಟ್ಟಿದ್ದರು.
ಇತ್ತ ಬಾಯ್‌ಫ್ರೆಂಡ್ ಕೊಟ್ಟ ಚಿನ್ನವನ್ನು ಕೇಳುತ್ತಿದ್ದಂತೆ ಆತನು ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಇತ್ತ ಬಡ ಕುಟುಂಬದ ಸಮೀರ್ ಅಹ್ಮದ್, ಜುಲ್ಲಾಕಾ ಬೇಗಂ ದಂಪತಿ ಲಕ್ಷಾಂತರ ರೂ.ಮೌಲ್ಯದ ಚಿನ್ನವನ್ನು ಕೊಡಲು ಆಗದೆ ಕಂಗಲಾಗಿದ್ದಾರೆ. ಮಗಳ ಯಡವಟ್ಟಿನಿಂದ ಮರ್ಯಾದೆಗೆ ಹೆದರಿ ಮೂವರು ಆತ್ಮಹತ್ಯೆಗೆ ನಿರ್ಧರಿಸಿದ್ದರು. ಅದರಂತೆ ರೈಲಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ದುರಂತದಲ್ಲಿ ತಂದೆ-ತಾಯಿ ಮೃತಪಟ್ಟರೆ, ಮಗಳು ಗಂಭೀರ ಗಾಯಗೊಂಡಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ