Site icon Vistara News

Road Accident : ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

Road Accident

ರಾಯಚೂರು: ನಿಂತಿದ್ದ ಟ್ಯಾಂಕರ್ ಟ್ಯಾಲಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟರೆ, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ಅಪಘಾತ ನಡೆದಿದೆ. ಯಮನಪ್ಪ (40) ಮೃತ ದುರ್ದೈವಿ.

ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದ ಯಮನಪ್ಪ ಲಿಂಗಸೂಗೂರು ಕಡೆಯಿಂದ ಮಸ್ಕಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ನಿಂತಿದ್ದ ಟ್ಯಾಂಕರ್‌ ಟ್ಯಾಲಿ ಕಾಣದೆ ಬೈಕ್‌ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಯಮನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಗೆ ಇದ್ದ ಗಂಗಣ್ಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಸ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಜ್ಜು-ಗುಜ್ಜಾಗಿದ್ದ ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಹಿಟ್‌ ಆ್ಯಂಡ್‌ ರನ್‌ ಕೇಸ್‌ಗೆ ಬೈಕ್‌ ಸವಾರ ಸಾವು

ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರಕನ್ನಡದ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಶಿರಾಲಿ ಬಳಿ ಘಟನೆ ನಡೆದಿದೆ. ರಾಮಚಂದ್ರ ನಾಗೇಶ್ ಮೊಗೇರ (42) ಮೃತ ದುರ್ದೈವಿ.

ರಾಮಚಂದ್ರ ಭಟ್ಕಳ ತಾಲೂಕಿನ ಅಳ್ವೆಕೋಡಿ ನಿವಾಸಿಯಾಗಿದ್ದು, ಕೈಕಿಣಿಯಿಂದ ಅಳ್ವೆಕೋಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆ ತೆರಳುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಾಘತದ ಬಳಿಕ ವೆಂಕಟಾಪುರ ಬಳಿ ಕಾರು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ.

ಗಂಭೀರ ಗಾಯಗೊಂಡಿದ್ದ ರಾಮಚಂದ್ರರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.

ಕೊಡಗಿನಲ್ಲಿ ಕಾರಿಗೆ ಕಾರು ಡಿಕ್ಕಿ

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ನಾಲ್ಕು ಕಾರುಗಳು ಜಖಂಗೊಂಡಿವೆ. ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಮೀನುಪೇಟೆಯಲ್ಲಿ ಘಟನೆ ನಡೆದಿದೆ. ನಿದ್ರೆ ಮಂಪರಿನಲ್ಲಿ ಇದ್ದಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ.

ನಸುಕಿನ ಜಾವ 2.30 ರ ಸಮಯಕ್ಕೆ ಅಪಘಾತ ನಡೆದಿದ್ದು, ಕಾರಿನಲ್ಲಿನದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Actor Darshan : ಕೊಲೆ ಕೇಸ್‌ ಬೆನ್ನಲ್ಲೆ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಈಜಲು ಹೋಗಿ ಬಾಲಕರು ನೀರುಪಾಲು

ಮೈಸೂರು: ಈಜಲು (Swimming) ಹೋಗಿ ಇಬ್ಬರು ಬಾಲಕರು ನೀರು ಪಾಲಾದ ಘಟನೆ (Drowned) ಮೈಸೂರಿನ ಸೌಕಾರಹುಂಡಿ ಕೆರೆಯಲ್ಲಿ (Lake) ನಡೆದಿದೆ. ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ವರುಣ್ (16) ಹಾಗೂ ಬಸವನಪುರ ನಿವಾಸಿ ಜಸ್ವಂತ್ (14) ಮೃತ ದುರ್ದೈವಿಗಳು.

ಮುಸ್ಸಂಜೆ ವೇಳೆ ಈಜಲು ತೆರಳಿದ್ದ ಈ ಯುವಕರು ಈಜುವ ವೇಳೆ ದುರ್ಘಟನೆ ನಡೆದಿದೆ. ನಡು ಕೆರೆಯಲ್ಲಿದ್ದಾಗ ಬಳಲಿ ತೀರಕ್ಕೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾವರೆ ಕೊಯ್ಯಲು ಹೋಗಿ ಹೂವಿನ ವ್ಯಾಪಾರಿ ಸಾವು

ತುಮಕೂರು: ಕೆರೆಯಲ್ಲಿದ್ದ ಕಮಲ ಕೀಳಲು ಹೋಗಿದ್ದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವಿಗೀಡಾದ ಘಟನೆ ತುಮಕೂರು ತಾಲೂಕಿನ ಅರಕೆರೆ ಕೆರೆಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಮಧ್ಯವೆಂಕಟಪುರದ ನಿವಾಸಿ ಶ್ರೀನಿವಾಸ್ (35) ಮೃತ ದುರ್ದೈವಿ.

ಹೂವಿನ ವ್ಯಾಪಾರಿಯಾಗಿದ್ದ ಶ್ರೀನಿವಾಸ್ ಅವರು, ಅದೇ ಊರಿನ ಕೆಂಪರಾಮಯ್ಯ, ಚಿಕ್ಕಹನುಮಯ್ಯ ಜೊತೆ ಕಮಲದ ಹೂ ಕೀಳಲು ಹೋಗಿದ್ದರು. ಈ ವೇಳೆ ಕೆಸರಲ್ಲಿ ಸಿಲುಕಿ ಮೇಲೇಳಲಾಗದೆ ಸಾವನ್ನಪ್ಪಿದ್ದಾರೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ ದುರ್ಘಟನೆ ನಡೆದಿದ್ದು, ಜೊತೆಗಿದ್ದವರು ಊರಿಗೆ ಹೋಗಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ತಿಬೆಲೆಯಲ್ಲಿ ಬಾಲಕ ನೀರುಪಾಲು

ಆನೇಕಲ್: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲಾಗಿರುವ ಘಟನೆ (Drowns in lake) ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಅತ್ತಿಬೆಲೆ ಸಮೀಪದ ಬಳ್ಳೂರು ಕೆರೆಯಲ್ಲಿ ನಡೆದಿದೆ. ಅತ್ತಿಬೆಲೆ ವಾಸಿ ಧನುಷ್ (14) ಮೃತ ಬಾಲಕ.

ರೈನ್ ಬೋ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕ, ಭಾನುವಾರ ಶಾಲೆಗೆ ರಜೆ ಇದಿದ್ದದ್ದರಿಂದ ಸ್ನೇಹಿತರ ಜತೆ ಈಜಲು ಕೆರೆಗೆ ಹೋಗಿದ್ದ. ಈ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಮೃತ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version