ರಾಯಚೂರು/ಬಾಗಲಕೋಟೆ: ರಾಯಚೂರಲ್ಲಿ ಪಾದಚಾರಿ ಮೇಲೆ ಬಸ್ ಹರಿದು ವ್ಯಕ್ತಿಯೊಬ್ಬರು (Road Accident) ದಾರುಣವಾಗಿ ಮೃತಪಟ್ಟಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಂಕುಶದೊಡ್ಡಿ ಗ್ರಾಮದ ನಿವಾಸಿ ಸಿದ್ದಪ್ಪ (22)ಮೃತ ದುರ್ದೈವಿ.
ಸಿದ್ದಪ್ಪ ಹೆದ್ದಾರಿ ರೋಡ್ ಕ್ರಾಸ್ ಮಾಡಿ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್‌ವೊಂದು ಸಿದ್ದಪ್ಪನಿಗೆ ಗುದ್ದಿದ್ದು, ಕೆಳಗೆ ಬಿದ್ದವನ ಮೇಲೆ ಹರಿದಿದೆ. ಅಪಘಾತದ ಬಳಿಕ ಬಸ್ ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ರೊಚ್ಚಿಗೆದ್ಧ ಗ್ರಾಮಸ್ಥರು ಬಸ್ ಅನ್ನು ಹಿಂಬಾಲಿಸಿಕೊಂಡು ಹೋಗಿ ಮಸ್ಕಿಯಲ್ಲಿ ತಡೆದಿದ್ದಾರೆ.
ಸದ್ಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸಲಾಗುತ್ತಿದೆ.
ಬೈಕ್‌ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಅಸುನೀಗಿದ ಬಾಲಕಿ
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಗ್ಗಲಮರಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಾಲಕಿಯೊಬ್ಬಳು ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗುಗ್ಗಲಮರಿ ಗ್ರಾಮದ ನಿವಾಸಿ ರಾಗಿಣಿ ದುರಗಪ್ಪ ಹುಣಸ್ಯಾಳ (11) ಮೃತ ದುರ್ದೈವಿ. ಬೈಕ್‌ನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿದ್ದ ಇಬ್ಬರು ತಾಲ್ಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಇಳಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇಳಕಲ್ಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Urvashi Rautela: ನಟಿ ಊರ್ವಶಿ ರೌಟೇಲಾ ಬಟ್ಟೆ ಬಿಚ್ಚಿ, ಸ್ನಾನ ಮಾಡುವ ವಿಡಿಯೊ ಲೀಕ್!
ದೊಡ್ಡಬಳ್ಳಾಪುರದಲ್ಲಿ ದ್ರಾಕ್ಷಿ ತುಂಬಿದ್ದ ಕ್ಯಾಂಟರ್ ಪಲ್ಟಿ
ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ಮಧುರನಹೊಸಹಳ್ಳಿ ಗೇಟ್ ಬಳಿ ದ್ರಾಕ್ಷಿ ತುಂಬಿದ್ದ ಕ್ಯಾಂಟರ್ ವಾಹನವೊಂದು ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಯಾಂಟರ್ ಪಕ್ಟಿ ಹೊಡೆದ ಕಾರಣದಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಕ್ರೈನ್ ಮೂಲಕ ಕ್ಯಾಂಟರ್ ತೆರವುಗೊಳಿಸಿದ್ದರು. ಇನ್ನೂ ರಸ್ತೆ ತುಂಬೆಲ್ಲ ಚೆಲ್ಲಾಡಿದ್ದ ದ್ರಾಕ್ಷಿಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಯಿತು. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಬಸ್ ಡಿಕ್ಕಿ
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಇಳಿದ ಸಾರಿಗೆ ಬಸ್‌ವೊಂದು ಸೇತುವೆಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಎಲ್ಲರೂ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಣಿಗನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.
ಆಲೂರಿನಿಂದ ಪುರಭೈರವನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಹಾಸನ ವಿಭಾಗದ ಕೆಎಸ್‌ಆರ್‌ಟಿಸಿ ಬಸ್ ಮಳೆಯಿಂದ ನಿಯಂತ್ರಣಕ್ಕೆ ಸಿಗದೆ ಹಳ್ಳಕ್ಕೆ ಇಳಿದಿದೆ. ಸದ್ಯ ಪ್ರಯಾಣಿಕರನ್ನು ಬೇರೆ ವಾಹನಗಳಲ್ಲಿ ಕಳುಹಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ