Site icon Vistara News

Road Accident : ಓವರ್‌ ಟೇಕ್‌ ಮಾಡುವಾಗ ಪಲ್ಟಿ ಹೊಡೆದ ಪೊಲೀಸ್‌ ಜೀಪ್‌; ಇಬ್ಬರಿಗೆ ಗಾಯ

Road Accident in raichur

ರಾಯಚೂರು: ಪೊಲೀಸ್ ವಾಹನವು ಪಲ್ಟಿಯಾಗಿದ್ದು, ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ. ರಾಯಚೂರಿನ ‌ಸಿಂಧನೂರು ತಾಲೂಕಿನ ರೈತನಗರ ಕ್ಯಾಂಪ್ ಬಳಿ ಅಪಘಾತ (Road Accident) ಸಂಭವಿಸಿದೆ.

ಮರಳಿನ ಟ್ಯಾಂಕರ್ ಓವರ್ ಟೇಕ್ ಮಾಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಪೊಲೀಸ್‌ ವಾಹನವು ರಸ್ತೆ ಬದಿಯಿಂದ ಪಕ್ಕದ ಗುಂಡಿಗೆ ಪಲ್ಟಿ ಹೊಡೆದಿದೆ. ಅಪಘಾತದಿಂದಾಗಿ ಪೇದೆಗಳಾದ ಶಕ್ಷವಲಿ (33), ಕರಿಯಪ್ಪ(35) ಎಂಬುವವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಂಧನೂರು ಟ್ರಾಫಿಕ್ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Accident Case : ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ; ಎರಡು ಹೋಳಾಯ್ತು ತಲೆ ಬುರುಡೆ

ಟಯರ್‌ ಬ್ಲಾಸ್ಟ್‌ ಆಗಿ ಟಿಪ್ಪರ್ ಪಲ್ಟಿ; ರಸ್ತೆ ಬದಿ ನಿಂತಿದ್ದ ಒಂದೇ ಕುಟುಂಬದ ಐವರ ದುರ್ಮರಣ

ಬಾಗಲಕೋಟೆ: ಟಯರ್‌ ಬ್ಲಾಸ್ಟ್‌ ಆಗಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿದ ಘಟನೆ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಹೊಲದ ಕೆಲಸ ಮುಗಿಸಿ ರಸ್ತೆ ಪಕ್ಕ ನಿಂತಿದ್ದವರ ಮೇಲೆ ಟಿಪ್ಪರ್‌ ಪಲ್ಟಿಯಾಗಿದ್ದರಿಂದ ದುರಂತ ನಡೆದಿದೆ.

ಬಾದರದಿನ್ನಿ ಗ್ರಾಮದ ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಪತ್ನಿ ಯಲ್ಲವ್ವ ಯಂಕಪ್ಪ ತೋಳಮಟ್ಟಿ (60), ಮಗ ಪುಂಡಲೀಕ ಯಂಕಪ್ಪ ತೋಳಮಟ್ಟಿ (35), ಮಗಳು ನಾಗವ್ವ ಅಶೋಕ ಬಮ್ಮಣ್ಣವರ (45), ಅಳಿಯ ಅಶೋಕ ನಿಂಗಪ್ಪ ಬಮ್ಮಣ್ಣವರ (50) ಮೃತರು. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ಬೀಳಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಶಾರ್ಟ್ ಸಕ್ಯೂರ್ಟ್‌ನಿಂದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ; 4 ವರ್ಷದ ಮಗು ಉಸಿರುಗಟ್ಟಿ ಸಾವು

ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರಲ್ಲಿ ಶಾರ್ಟ್ ಸಕ್ಯೂರ್ಟ್‌ನಿಂದ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ 4 ವರ್ಷದ ಮಗುವೊಂದು ಉಸಿರುಗಟ್ಟಿ (Fire Accident) ಮೃತಪಟ್ಟಿದೆ. ಈ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಭಾನುವಾರ (ಏ.16) ಸಂಜೆ ಸಂಭವಿಸಿದೆ. ಅನೂಪ್ (4 ವರ್ಷ) ಮೃತ ದುರ್ದೈವಿ.

ಸುಲ್ತಾನ್ ಪಾಳ್ಯ ಬಳಿಯಿರುವ ವುಡ್ ಅಪಾರ್ಟ್‌ಮೆಂಟ್‌ನ ನಾಲ್ಕನೇ‌ ಮಹಡಿಯಲ್ಲಿರುವ ಮನೆಯೊಂದರಲ್ಲಿ ಶಾರ್ಟ್‌ ಸಕ್ಯೂರ್ಟ್‌ ಆಗಿದೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿಯ 4 ವರ್ಷದ ಗಂಡು ಮಗು ಅನೂಪ್ ಮೃತಪಟ್ಟಿದ್ದಾನೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿ ನೇಪಾಳ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲೇ ವಾಸವಾಗಿದ್ದರು. ಇನ್ನೂ ಇದೇ ವುಡ್‌ ಅಪಾರ್ಟ್‌ಮೆಂಟ್‌ನಲ್ಲಿ ಮಗುವಿನ ತಂದೆ ಕುರಾನ್ ಖಂಡಕ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಲಕ್ಷ್ಮಿ ಹೌಸ್‌ ಕೀಪಿಂಗ್ ಆಗಿ ಕೆಲಸ‌ ಮಾಡುತ್ತಿದ್ದರು.

ದಂಪತಿ ವಾಸ್ತವ್ಯಕ್ಕಾಗಿ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯಲ್ಲಿ ಮನೆ ನೀಡಲಾಗಿತ್ತು. ಗಂಡ-ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ-ಪಾಲನೆ ಕಷ್ಟವಾಗಿತ್ತು. ಹೀಗಾಗಿ ಪ್ರತಿದಿನ ಮಧ್ಯಾಹ್ನ ಮಗುವನ್ನು ಮಲಗಿಸಿ ಡೋರ್ ಲಾಕ್ ಹಾಕಿಕೊಂಡು ತಮ್ಮ ಹೊರಗಿನ ಕೆಲಸ ಮಾಡುತ್ತಿದ್ದರು.

ನಿನ್ನೆ ಭಾನುವಾರ ಸಹ ಮಗು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್‌ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಸಂಭವಿಸಿದೆ. ಮಗು ಮಲಗಿದ್ದಾಗ ಸಂಜೆ ವೇಳೆ‌ ಎಲೆಕ್ಟ್ರಿಕಲ್ ಶಾರ್ಟ್ ಸಕ್ಯೂರ್ಟ್ ಕಾಣಿಸಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ.

ಇತ್ತ ಎಂದಿನಂತೆ ಕೆಲಸ‌ ಮುಗಿಸಿಕೊಂಡು ಬಂದಾಗ‌ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಪೋಷಕರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಅಗ್ನಿ ನಂದಿಸಿದರೂ ಅಷ್ಟೊತ್ತಿಗಾಗಲೇ ಉಸಿರುಗಟ್ಟಿ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.

ಯಾದಗಿರಿಯಲ್ಲಿ ಬೆಂಕಿಗೆ ತುತ್ತಾದ ಅಂಗಡಿ

ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯೊಂದು ಹೊತ್ತಿ ಉರಿದಿದೆ. ಯಾದಗಿರಿ ನಗರದ ಹೊಸಳ್ಳಿ ಕ್ರಾಸ್‌ ಬಳಿ ಇರುವ ನಿಸ್ಸಿ ಪ್ಲೈವುಡ್ ಶಾಪ್ ಧಗಧಗನೇ ಹೊತ್ತಿ ಉರಿದಿದ್ದು, ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಅಂದಾಜು 25 ಲಕ್ಷ ಮೌಲ್ಯದ ಮಷೀನ್‌ಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version