ರಾಯಚೂರು: ಬೆಳ್ಳಂ ಬೆಳಗ್ಗೆ ಪಾದಯಾತ್ರೆ ಹೊರಟಿದ್ದ ತಾಯಿ-ಮಗಳಿಗೆ ಟಾಟಾಏಸ್ ವಾಹನ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ತಾಯಿ ದಾರುಣವಾಗಿ ಮೃತಪಟ್ಟರೆ, ಮಗಳಿಗೆ ಗಂಭೀರ ಗಾಯವಾಗಿದೆ. ರಾಯಚೂರಿನ ಲಿಂಗಸೂಗೂರು ತಾಲೂಕಿನ ನಾಗಲಾಪೂರು ಗ್ರಾಮ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ.
ವ್ಯಾಸ ನಂದಿಹಾಳ ಗ್ರಾಮದ ನಿವಾಸಿ ಭಾಗ್ಯಮ್ಮ (35) ಅಪಘಾತದಲ್ಲಿ ಮೃತಪಟ್ಟವರು. ಭಾಗ್ಯಮ್ಮಳ ಮಗಳು ಸಾವು -ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ತಲೆಗೆ ಗಂಭೀರ ಗಾಯವಾಗಿದ್ದು, ಆಕೆಗೆ ಚಿಕಿತ್ಸೆ ಮುಂದುವರಿದಿದೆ.
ಛತ್ತರದ ಹನುಮಾನ್ ದೇವಸ್ಥಾನಕ್ಕೆ ತಾಯಿ-ಮಗಳು ಇಬ್ಬರೂ ಪಾದಯಾತ್ರೆ ಹೊರಟಿದ್ದರು. ಈ ವೇಳೆ ವೇಗವಾಗಿ ಬಂದ ವಾಹನವು ಇವರಿಬ್ಬರಿಗೂ ಗುದ್ದಿದೆ. ಕೆಳಗೆ ಬಿದ್ದವರೇ ಗಂಭೀರ ಗಾಯಗೊಂಡಿದ್ದರು. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Murder Case : ಬೆಂಗಳೂರಲ್ಲಿ ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ; ಬಾಳಸಂಗಾತಿ ಈಗ ಕೊಲೆಗಾರ್ತಿ
ದಾವಣಗೆರೆಯಲ್ಲಿ ಸ್ಪಿರಿಟ್ ತುಂಬಿದ ಟ್ಯಾಂಕರ್ ಪಲ್ಟಿ
ಸ್ಪಿರಿಟ್ ತುಂಬಿದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಡರ್ ಪಾಸ್ ಸೇತುವೆಯಿಂದ ಕೆಳಗೆ ಪಲ್ಟಿಯಾಗಿದೆ. ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಕಡೆಯಿಂದ ಪೂನಾ ಕಡೆಗೆ ಹೋಗುತ್ತಿದ್ದ ಸ್ಪಿರಿಟ್ ತುಂಬಿದ ಟ್ಯಾಂಕರ್ ಏಕಾಏಕಿ ಹೆದ್ದಾರಿಯಿಂದ ಕೆಳಗೆ ಬಿದ್ದಿದೆ. ಸ್ಪಿರಿಟ್ ಸೋರಿಕೆ ಆಗುತ್ತಿರುವ ಕಾರಣ ಕೆಲ ಹೊತ್ತು ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಟ್ಯಾಂಕರ್ ಕೆಳಗೆ ಪಲ್ಟಿ ಆಗುತ್ತಿದ್ದಂತೆ ಬೇರೆ ಕಡೆ ಜಂಪ್ ಮಾಡಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಬಚಾವ್ ಆಗಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ