ಮಂಗಳೂರು: ಕೇರಳ- ಕರ್ನಾಟಕ ಗಡಿ ಭಾಗದಲ್ಲಿ ಹಲವೆಡೆ ರೈಲ್ವೆ ಹಳಿ ತಪ್ಪಿಸುವ ಯತ್ನ ಕಂಡುಬಂದಿದ್ದು, ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿರಬಹುದು ಎಂದು ಶಂಕಿಸಲಾಗಿದೆ.
ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿದೆ. ರೈಲ್ವೇ ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್ ತುಂಡು ಪತ್ತೆಯಾಗಿವೆ. ಕೇರಳ ರಾಜ್ಯದ ಕಾಸರಗೋಡಿನ ಹಲವೆಡೆ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆಗಳಲ್ಲಿ ರೈಲು ಹಳಿ ತಪ್ಪಿಸಲು ಯತ್ನ ನಡೆದಿದ್ದು, ಇದು ಕಾಸರಗೋಡಿನಿಂದ ಮಂಗಳೂರಿಗೆ ಬರುವ ರೈಲ್ವೆ ಮಾರ್ಗವಾಗಿದೆ.
ಅ.21ರ ರವಿವಾರ ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆ ರೈಲು ಹಳಿಯಲ್ಲಿ ಕಬ್ಬಿಣದ ಸರಳುಗಳು ಪತ್ತೆಯಾಗಿದ್ದು, ರೈಲ್ವೇ ಗಾರ್ಡ್ ಸಮಯಪ್ರಜ್ಞೆಯಿಂದ ಸಂಭಾವ್ಯ ರೈಲು ದುರಂತ ತಪ್ಪಿದೆ. ಭಾರಿ ಗಾತ್ರದ ಕಾಂಕ್ರೀಟ್ ತುಂಡನ್ನು ಹಳಿ ಮೇಲೆ ಇರಿಸಿ ದುಷ್ಕೃತ್ಯಕ್ಕೆ ಪ್ಲಾನ್ ಮಾಡಲಾಗಿತ್ತು. ಕುಂಬಳೆ ರೈಲು ನಿಲ್ದಾಣದ 400 ಮೀಟರ್ ದೂರದಲ್ಲೂ ಹಳಿಗಳ ಮೇಲೆ ಕಲ್ಲುಗಳು ಪತ್ತೆಯಾಗಿವೆ.
ಮಂಗಳೂರು-ಚೆನ್ನೈ ಸೂಪರ್‌ಫಾಸ್ಟ್ ರೈಲು ಸಂಚರಿಸುವ ಮಾರ್ಗದಲ್ಲಿ ಕಲ್ಲುಗಳು ಪತ್ತೆಯಾಗಿದ್ದು, ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್), ರೈಲ್ವೇ ಪೊಲೀಸರು ಮತ್ತು ಸ್ಥಳೀಯ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಈ ನಡುವೆ, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಹಲವೆಡೆ ರೈಲಿಗೆ ಕಲ್ಲು ತೂರಿದ ಬಗ್ಗೆಯೂ ಮಾಹಿತಿಯಿದೆ. ಕಳೆದ ಶನಿವಾರ ಚಿತ್ತಾರಿ ಎಂಬಲ್ಲಿ ಕೊಯಮತ್ತೂರು-ಮಂಗಳೂರು ರೈಲಿನ ಮೇಲೆ ಕಲ್ಲು ತೂರಲಾಗಿದೆ.
ಇದನ್ನೂ ಓದಿ | ರೈಲ್ವೆ ಮೇಲ್ಸೇತುವೆ ಕಾಮಗಾರಿ: ಪಾಟರಿ ರಸ್ತೆ- ಕ್ಲಾರೆನ್ಸ್ ಜಂಕ್ಷನ್ ಮಾರ್ಗದಲ್ಲಿ ನಾಳೆಯಿಂದ ಸಂಚಾರ ಬಂದ್