ಬೆಂಗಳೂರು: ಇಂದಿನಿಂದ 5 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಹವಾಮಾನ ಇಲಾಖೆ ಸಂದೇಶ ನೀಡಿದೆ. ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಭಾಗದಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ.
ನಿನ್ನೆ ಮಧ್ಯರಾತ್ರಿಯೇ ತುರ್ತು ಪ್ರಕಟಣೆ ಹೊರಡಿಸಿದ ಬೆಂಗಳೂರು ಹವಾಮಾನ ಕೇಂದ್ರ, ಐದು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದಿರುವಂತೆ, ಜಿಲ್ಲಾಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಬಿರುಗಾಳಿ, ಗುಡುಗು-ಮಿಂಚು ಸಹಿತ ಮಳೆಯಾಗಲಿದೆ. ಈ ಭಾಗಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮಾರುತುಗಳು ರಾಜ್ಯದ ಗಡಿ ದಾಟಿ ಹೋದ ನಂತರ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.
ತಗ್ಗು ಹಾಗೂ ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದಿರಬೇಕು. ಐದು ಜಿಲ್ಲೆಗಳ ಪ್ರವಾಸಕ್ಕೆ ಹೊರಟಿರುವ ಪ್ರವಾಸಿಗರು ತಮ್ಮ ಯೋಜನೆಯನ್ನು ಒಂದೆರಡು ದಿನಗಳ ಮಟ್ಟಿಗೆ ಮುಂದೂಡಿದರೆ ಉತ್ತಮ. ರಾಜಧಾನಿಯ ಕೆಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಸಂಜೆ ನಿರಂತರವಾಗಿ ಮಳೆಯಾಗುತ್ತಿದೆ. ಬೆಂಗಳೂರು (bengaluru rain) ದಕ್ಷಿಣ ಭಾಗದ ಆರ್ಆರ್ ನಗರ, ಮೈಸೂರು ರಸ್ತೆ, ಕೆಂಗೇರಿ, ವಿದ್ಯಾಪೀಠ, ವಿಜಯನಗರ, ಅತ್ತಿಗುಪ್ಪೆ ಹಾಗೂ ಕೆಆರ್ ಪುರ ಭಾಗಗಳಲ್ಲಿ ಮಳೆಯಾಗಿದೆ.
ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮಳೆ ಅಬ್ಬರ; ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ನೀರು