ಬೆಂಗಳೂರು: ರಾಜ್ಯಾದ್ಯಂತ ನೈರುತ್ಯ ಮುಂಗಾರು ಚುರುಕು ಪಡೆದುಕೊಂಡಿದ್ದು, ಕರಾವಳಿಯೊಂದಿಗೆ ಮಲೆನಾಡು ಭಾಗಗಳಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ಗುಡ್ಡ ಕುಸಿತ, ಕಟ್ಟಡ ಗೋಡೆ ಕುಸಿತ, ಮಳೆ ನೀರು ಜಲಾವೃತಗೊಂಡಿದೆ. ಕರಾವಳಿ ಸೇರಿದಂತೆ ಹಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕಲಬುರಗಿಯಲ್ಲಿ ಕಳೆದ 2 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜುಲೈ 9ರಂದು ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಎಲ್ಲ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶಿಸಿದ್ದಾರೆ.
ಇದನ್ನೂ ಓದಿ | ಮನೆಯೊಳಗೆ ನೀರು ನುಗ್ಗಿದರೆ ₹10 ಸಾವಿರ ಪರಿಹಾರ: ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಸಭೆ
ಉತ್ತರಕನ್ನಡ ಭಾಗದಲ್ಲೂ ವರುಣನ ಅಬ್ಬರ ಮುಂದುವರಿದಿದ್ದು, ಅತಿ ಹೆಚ್ಚು ಮಳೆಯಾಗುತ್ತಿರುವ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ವಿಸ್ತರಣೆ ಮಾಡಲಾಗಿದೆ. ಜುಲೈ 9 ರಂದು ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ ತಾಲ್ಲೂಕುಗಳಿಗೆ ಮಾತ್ರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ. ಉಳಿದಂತೆ ಯಲ್ಲಾಪುರ, ಹಳಿಯಾಳ ಹಾಗೂ ದಾಂಡೇಲಿ ತಾಲ್ಲೂಕುಗಳ ಶಾಲೆ, ಕಾಲೇಜಿಗೆ ರಜೆ ಇರುವುದಿಲ್ಲ.
ಕೊಡುಗು ಜಿಲ್ಲೆಯಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎಲ್ಲ ಶಾಲಾ- ಕಾಲೇಜುಗಳಿಗೆ, ಅಂಗನವಾಡಿಗಳಿಗೆ ರಜೆ ವಿಸ್ತರಣೆಯಾಗಿದ್ದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Weather Report: ಕರಾವಳಿಯಲ್ಲಿ ಮತ್ತೆರಡು ದಿನ ರೆಡ್ ಅಲರ್ಟ್: ಜುಲೈ 9ರಂದು ಶಾಲಾ-ಕಾಲೇಜುಗಳಿಗೆ ರಜೆ