ಬೆಂಗಳೂರು : ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದಲ್ಲಿ ಸಾಲು ಸಾಲು ಅವಾಂತರ ಸೃಷ್ಟಿಯಾಗಿವೆ. ನಗರದ 8 ವಲಯಗಳಲ್ಲೂ ಅಲ್ಲಲ್ಲಿ ಮಳೆಯಿಂದ ಅನಾಹುತ ಉಂಟಾಗಿವೆ. ಕೆ. ಆರ್. ಪುರದ ಗಾಯತ್ರಿ ಬಡಾವಣೆಯಲ್ಲಿ ಯುವಕ ಮಿಥುನ್ (24) ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರೆ, ಮಹದೇವಪುರದ ಕಾವೇರಿ ನಗರದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಮುನಿಯಮ್ಮ (೫೫) ಮೃತಪಟ್ಟಿದ್ದಾರೆ.
ಶಿವಮೊಗ್ಗ ಮೂಲದ ಯುವಕ ನಾಲ್ಕೈದು ಸ್ನೇಹಿತರು ಒಟ್ಟಿಗೆ ಇದ್ದುಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗಾಯತ್ರಿ ಬಡಾವಣೆಯಲ್ಲಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಕುಸಿದು ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ದ್ವಿಚಕ್ರ ವಾಹನ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಈ ವೇಳೆ ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ನಂತರ ನೀರಿನ ಜತೆಗೆ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಸದ್ಯ ಅಗ್ನಿಶಾಮಕ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಕೊಚ್ಚಿ ಹೋದ ಯುವಕನ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ | ನವಲಗುಂದ: ಭಾರಿ ಮಳೆಗೆ ಜಲಾವೃತಗೊಂಡ ಶಾಲೆಯಲ್ಲಿ ಸಿಲುಕಿದ್ದ 150 ಮಕ್ಕಳ ರಕ್ಷಣೆ
ಎರಡು ಪ್ರತ್ಯೇಕ ತಂಡಗಳಾಗಿ ಯುವಕನಿಗಾಗಿ ಪತ್ತೆಕಾರ್ಯ ಈಗಾಗಲೇ ಆರಂಭಗೊಂಡಿದೆ. ಗಾಯತ್ರಿ ಬಡಾವಣೆಯಿಂದ ಸುಮಾರು ಎರಡು ಕಿಲೋಮೀಟರ್‌ವರೆಗೂ ಹುಡುಕಾಟ ನಡೆಸಲಾಗಿದ್ದು, ರಾಜಕಾಲುವೆ ಮಾರ್ಗದಲ್ಲಿನ ಕಬ್ಬಿಣದ ಜಾಲರಿಗಳಲ್ಲಿ ಮೊದಲಿಗೆ ಯುವಕನಿಗಾಗಿ ಹುಡುಕಾಟ ನಡೆಸಿದ್ದರು. ರಾಜಕಾಲುವೆಯ ಜಾಲರಿಯಲ್ಲಿ ಯುವಕ ಪತ್ತೆಯಾಗದಿದ್ದಲ್ಲಿ ಕೆರೆಯಲ್ಲಿ ಯುವಕನ ಪತ್ತೆಗಾಗಿ ಶೋಧಕಾರ್ಯ ಆಗಲಿದೆ. ಚೀಫ್ ಫೈರ್ ಆಫೀಸರ್ ರವಿಪ್ರಸಾದ್ ನೇತೃತ್ವದಲ್ಲಿ ಯುವಕನ ಪತ್ತೆಕಾರ್ಯ ಆರಂಭಗೊಂಡಿದೆ.
ಕಾವೇರಿ ನಗರದಲ್ಲಿ ಮಳೆಯಿಂದಾಗಿ ಗೋಡೆ ಕುಸಿದು ಮನೆಯಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಮುನಿಯಮ್ಮ (55) ಮೃತ ದುರ್ದೈವಿಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಮುನಿಯಮ್ಮ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಗೊಂಡಿರುವ ಮನೆಯ ಉಳಿದ ಇಬ್ಬರಿಗೂ ಚಿಕತ್ಸೆ ಮುಂದುವರಿದಿದೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಹದೇವಪುರ ವಲಯ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಚಲಪತಿ, ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ಷಮೆ ಕೇಳಿದ ಸಚಿವ ಭೈರತಿ:
ಸಚಿವ ಭೈರತಿ ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿ, ನಾನು ಶಾಸಕನಾಗುವ ಮುಂಚೆಯಿಂದ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ರಾತ್ರಿ ಅತಿ ಹೆಚ್ಚು ಮಳೆಯಾಗಿದೆ. ಮಳೆ ಅನಾಹುತ ಅಗಿರುವ ಮನೆಗಳಿಗೆ ಪರಿಹಾರ ಕೊಡುತ್ತೇವೆ. ಯುವಕನ ಕುಟುಂಬಕ್ಕೂ ಪರಿಹಾರ ಕೊಡುತ್ತೇನೆ. ಜನರಲ್ಲಿ ಕ್ಷಮೆ ಕೇಳುತ್ತೇನೆ. ಯುವಕನ ದೇಹವನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಸಂಜೆಯವರೆಗೂ ಇಲ್ಲಿಯೇ ಇರುತ್ತೇನೆ. ಅಲ್ಲದೆ ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ಹಲವು ರಾಜ್ಯಗಳಲ್ಲಿ ಮಳೆಯಬ್ಬರ, ಪ್ರವಾಹ; ಮೂರ್ನಾಲ್ಕು ದಿನ ರಾಜ್ಯದಲ್ಲೂ ಭಾರೀ ಮಳೆ ಅಲರ್ಟ್