ಬೆಂಗಳೂರು: ಹಲವು ದಿನಗಳಿಂದ ಬಿಸಿಲು ಕಂಡಿದ್ದ ರಾಜಧಾನಿಯಲ್ಲಿ ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿಯಿತು. ರಾತ್ರಿ 9 ಗಂಟೆಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆ ಬಿಡದೆ ಸುರಿದು ರಸ್ತೆ ಸಂಚಾರವನ್ನು ಅಸ್ತವ್ಯಸ್ತಗೊಳಿಸಿತು.
ಕಾರ್ಪೋರೇಷನ್, ಮೆಜೆಸ್ಟಿಕ್, ಮಲ್ಲೇಶ್ವರಂ ಸೇರಿದಂತೆ ಹಲವು ಪ್ರಮುಖ ಭಾಗಗಳಲ್ಲಿ ಮಳೆಯಾಯಿತು. ಕಚೇರಿಯಿಂದ ಮನೆ ಕಡೆಗೆ ಹೊರಟಿದ್ದ ವಾಹನ ಸವಾರರು ರಸ್ತೆಯಲ್ಲಿ ನೀರು ತುಂಬಿ ಫಜೀತಿ ಅನುಭವಿಸಿದರು. ಪಾದಚಾರಿ ಮಾರ್ಗಗಳು ಕೂಡ ಜಲಾವೃತವಾದುದರಿಂದ ಪಾದಚಾರಿಗಳು ನಡೆಯಲು ಎಡೆಯಿಲ್ಲದೆ ಸಿಲುಕಿಕೊಂಡರು. ಬಸ್ ನಿಲ್ದಾಣಗಳಲ್ಲಿ, ಅಂಗಡಿಗಳ ಮುಂದೆ ಆಶ್ರಯ ಪಡೆದರು. ವಾರಾಂತ್ಯದಲ್ಲಿ ಊರಿನ ಕಡೆಗೆ ಹೊರಟಿದ್ದ ಹೊರ ಊರಿನ ಜನತೆ, ಮೆಜೆಸ್ಟಿಕ್ ಆಸುಪಾಸು ಸಂಚಾರ ದಟ್ಟಣೆಯಿಂದ ಆತಂಕ ಅನುಭವಿಸಿದರು.
ಒಂದು ಗಂಟೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ವಿಜಯನಗರದಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿತು. ಹೊಸದಾಗಿ ನಿರ್ಮಾಣವಾದ ರಸ್ತೆಯಲ್ಲಿ 2 ಅಡಿಗೂ ಹೆಚ್ಚು ನೀರು ನಿಂತಿತು. ನವೀಕರಣಗೊಂಡ ರಾಜಕಾಲುವೆಯಿಂದಲೂ ನೀರು ಉಕ್ಕಿ ಹರಿಯಿತು.
ರಾಜ್ಯದ ಹಲವೆಡೆ ಕೂಡ ಇದೇ ಸಂದರ್ಭದಲ್ಲಿ ಭಾರೀ ಮಳೆಯಾಗಿದೆ. ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ ಹಾಗು ನಗರ ಸೇರಿದಂತೆ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಚಿಕ್ಕೋಡಿ: ಕಳೆದ ಒಂದು ವಾರದಿಂದ ಶಾಂತವಾಗಿದ್ದ ಮಳೆರಾಯ ಮತ್ತೆ ಇಂದಿನಿಂದ ತನ್ನ ಆರ್ಭಟ ಆರಂಭಿಸಿದ್ದಾನೆ. ಚಿಕ್ಕೋಡಿ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನದಿಂದ ಧಾರಾಕಾರ ಮಳೆ ಆರಂಭವಾಗಿದೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾದ ಕಾರಣ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ರಾಜೇಸಾಬ್ ಮುಲ್ತಾನಿ ಹಾಗೂ ಲಕ್ಷವ್ವ ಕುಗಟೋಳಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.
ಆನೇಕಲ್: ಬೆಂಗಳೂರು ಗ್ರಾಮಾಂತರ ಪ್ರದೇಶವಾದ ಆನೇಕಲ್‌ನಲ್ಲಿ ಭಾರಿ ಮಳೆಗೆ ಜನರು ತತ್ತರಗೊಂಡರು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿತು. ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಗಳೆಲ್ಲ ಸಂಪೂರ್ಣ ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿತು.