Site icon Vistara News

Rain News | ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟ; 3 ದಿನದಲ್ಲಿ 35 ಮನೆ ಕುಸಿತ, 17ಕ್ಕೂ ಅಧಿಕ ಸೇತುವೆಗಳು ಜಲಾವೃತ

Rain News

ಬೆಳಗಾವಿ: ಕಳೆದ ಮೂರು ದಿನಗಳಿಂದ ಗಡಿ ಜಿಲ್ಲೆಯಲ್ಲಿ ಮಳೆಯ (Rain News) ಆರ್ಭಟ ಜೋರಾಗಿದೆ. ಮೂರೇ ದಿನಗಳ ಅವಧಿಯಲ್ಲಿ ಮಳೆಯಿಂದ 35ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, 17ಕ್ಕೂ ಅಧಿಕ ಸೇತುವೆಗಳು ಜಲಾವೃತವಾಗಿವೆ. ಬೈಲಹೊಂಗಲ, ಸವದತ್ತಿ, ಚಿಕ್ಕೋಡಿ, ಬೆಳಗಾವಿಯಲ್ಲಿ 16 ಮನೆಗಳು ಕುಸಿದಿದ್ದು, ನಿಪ್ಪಾಣಿ ತಾಲೂಕಿನಲ್ಲೇ 19 ಮನೆಗಳು ಕುಸಿದಿವೆ.

ಗೋಕಾಕ್‌-ಶಿಂಗಳಾಪುರ, ಹುಕ್ಕೇರಿ-ಯರನಾಳ, ಕುರಣಿ-ಕೋಚರಿ, ಕುನ್ನೂರ-ಬೋರವಾಡ, ಅಕ್ಕೋಳ-ಸಿದ್ನಾಳ ಸೇತುವೆ ಮುಳುಗಡೆಯಾಗಿದ್ದು, ಕುನ್ನೂರ-ಬೋಜವಾಡ, ಕುನ್ನೂರ-ಬೋರಬಾಡ, ಭಿವಶಿ-ಜತ್ರಾಟ ಸೇತುವೆ ಸೇರಿ 17 ಸೇತುವೆಗಳು ಜಲಾವೃತವಾಗಿವೆ.

ಹಾಗೆಯೇ ಹಿರಣ್ಯಕೇಶಿ, ವೇದಗಂಗಾ ಹಾಗೂ ಘಟಪ್ರಭಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಗೋಡಗೇರಿ- ನೇಗಿನಹಾಳ ಸೇತುವೆ ಜಲಾವೃತವಾಗಿದೆ. ಹೀರಣ್ಯಕೇಶಿ ಹಾಗೂ ವೇದಗಂಗಾ ನದಿಗೆ ಕಟ್ಟಲಾಗಿರುವ 7 ಕೆಳಹಂತದ ಸೇತುವೆಗಳು ಜಲಾವೃತವಾಗಿವೆ. ನದಿ ಪಾತ್ರ ಬಿಟ್ಟು ನೀರು ಹರಿದ ಪರಿಣಾಮ ರೈತರ ಜಮೀನುಗಳು ಜಲಾವೃತವಾಗಿವೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ.
ಮಳೆಯಿಂದ ಮುಸಗುಪ್ಪಿಯ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಜಲಕಂಟಕ ಎದುರಾಗಿದೆ.

ಇದನ್ನೂ ಓದಿ | Rain News | ಬೆಳಗಾವಿಯಲ್ಲಿ ಮಳೆ ಆರ್ಭಟ : ಭೋರ್ಗರೆದ ಘಟಪ್ರಭಾ ‌ನದಿ, ಪ್ರವಾಹ ಭೀತಿ

ಮೂಡಲಗಿ ತಾಲೂಕಿನ ಮುಸುಗುಪ್ಪಿ ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೆ ಘಟಪ್ರಭಾ ನದಿ ನೀರು ನುಗ್ಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ದೇವಸ್ಥಾನಕ್ಕೆ ಎರಡನೇ ಬಾರಿಗೆ ನೀರು ನುಗ್ಗಿದ್ದು, ಇಲ್ಲಿನ ಕೆಲ ಮನೆಗಳಿಗೂ ನೀರು ನುಗ್ಗಿದ್ದರಿಂದ ನದಿ ತೀರದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಸರ್ಕಾರಿ ಶಾಲೆ ಸುತ್ತುವರಿದ ನದಿ ನೀರು
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದೆ ಮಳೆಸುರಿಯುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಗೋಕಾಕ್ ತಾಲೂಕಿನ ತಳಕಟನಾಳ ಗ್ರಾಮಕ್ಕೆ ಘಟಪ್ರಭಾ ನದಿ ನೀರು ನುಗ್ಗುವ ಭೀತಿ ಉಂಟಾಗಿದೆ. ನದಿ ನೀರು ಸುತ್ತುವರಿದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿನ ಬಿಸಿಯೂಟದ ಆಹಾರದ ಸಾಮಗ್ರಿ, ಪಠ್ಯ ಪುಸ್ತಕಗಳು, ದಾಖಲೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು.

ಎರಡನೇ ಬಾರಿಗೆ ಗೋಕಾಕ್ ‌ನಗರದ ಹಲವು ಭಾಗ ಜಲಾವೃತ
ಪಶ್ಚಿಮ ‌ಘಟ್ಟಗಳ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯ ಹಿಡಕಲ್ ಜಲಾಶಯ ಭರ್ತಿಯಾಗಿ ಭೋರ್ಗರೆದು ಹರಿಯುತ್ತಿದೆ. ಹೀಗಾಗಿ ಜಲಾಶಯದಿಂದ 27 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿಗೆ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಭೀಕರ ಮಳೆಯಿಂದ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಗೋಕಾಕ್ ‌ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಉಪ್ಪಾರ ಓಣಿ, ದನದ ಮಾರ್ಕೆಟ್‌, ಮಟನ್ ಮಾರ್ಕೆಟ್‌ ನೀರು ನುಗ್ಗಿದ್ದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಮಳೆ ಹೆಚ್ಚುತ್ತಿರುವುದಕ್ಕೆ ಕಾಳಜಿ ಕೇಂದ್ರಗಳನ್ನು ‌ತೆರೆಯಲು ಗೋಕಾಕ್‌, ಮೂಡಲಗಿ ತಾಲೂಕು ಆಡಳಿತಗಳು ಸಿದ್ಧತೆ ನಡೆಸುತ್ತಿದ್ದು, ಪ್ರವಾಹ ಪರಿಸ್ಥಿತಿ ‌ಸಮರ್ಪಕವಾಗಿ ಎದುರಿಸುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹಿಡಕಲ್‌ ಜಲಾಶಯ.

ಎಚ್ಚರಿಕೆ ವಹಿಸುವಂತೆ ಈರಣ್ಣ ಕಡಾಡಿ ಮನವಿ
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಮಸ್ಯೆ ಎದುರಾಗಿದೆ. ಹಿಡಕಲ್ ಜಲಾಶಯ, ಬಳ್ಳಾರಿ ನಾಲಾದಿಂದ ಘಟಪ್ರಭಾ ನದಿಗೆ 56 ಸಾವಿರ ಕ್ಯೂಸೆಕ್ ನೀರು ಬಿಡುಗಡೆ‌ ಮಾಡಲಾಗಿದೆ. ಹೀಗಾಗಿ ಗೋಕಾಕ್, ಮೂಡಲಗಿ ತಾಲೂಕುಗಳ ಜನರಿಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳ ಪಿಡಿಒ, ಗ್ರಾಪಂ‌ ಸದಸ್ಯರು ನಿಗಾ ವಹಿಸಬೇಕು ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Rain News | ಮಳೆಗೆ ಜನ ಅತಂತ್ರ; ಹೊನ್ನಾವರ ತಾಲೂಕಿನಲ್ಲಿ ಎರಡು ಕಾಳಜಿ ಕೇಂದ್ರ ಆರಂಭ

Exit mobile version