Site icon Vistara News

Rain In Karnataka | ಜಿಟಿಜಿಟಿ ಮಳೆಗೆ, ಮೈ ಕೊರೆಯುವ ಚಳಿ ಸಾಥ್‌; ರಾಜ್ಯದ ಹಲವೆಡೆ ತತ್ತರಿಸಿದ ಜನ

rain in karnataka

ಬೆಂಗಳೂರು: ಹೊರಗೆ ಬಂದರೆ ಜಿಟಿ ಜಿಟಿ ಮಳೆ, ಒಳಗೆ ಮೈ ಕೊರೆಯುವ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ಹೊಂದಿಕೆಯ ರೀತಿ ಮಂಜು ಆವರಿಸಿದ್ದು, ಎಲ್ಲರನ್ನು ಗಡ ಗಡ ನಡುಗಿಸುವಂತೆ ಮಾಡಿದೆ. ತುಂತುರು ಮಳೆ, ಮಂಜಿನಿಂದ ರಸ್ತೆ ಮುಚ್ಚಿಹೋದಂತೆ (Rain In Karnataka) ಭಾಸವಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಯಿತು.

ದ್ವಿಚಕ್ರ ಬಿಟ್ಟು ಮೆಟ್ರೋ ಮೊರೆ ಹೋದ ಸಿಟಿ ಮಂದಿ
ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆಯ ಕಾಟ ವಿಪರೀತವಾಗಿಯೇ ಕಾಡಿದೆ. ಬೆಳ್ಳಂಬೆಳಗ್ಗೆ ಹಿಡಿದುಕೊಂಡ ಜಿಟಿಜಿಟಿ ಮಳೆಗೆ ಜನರು ಹೊರಗೆ ಬರಲು ಆಗದೆ ಪರದಾಡಬೇಕಾಯಿತು. ಕಳೆದ ಹಲವು ದಿನಗಳಿಂದ ಥಂಡಿ ವಾತಾವರಣಕ್ಕೆ ತತ್ತರಿಸಿದ್ದ ಜನರಿಗೆ ಬುಧವಾರದಿಂದ ಮಳೆಯು ಸಾಥ್‌ ನೀಡಿದ್ದರಿಂದ ಕಚೇರಿ ಕೆಲಸಗಳಿಗೆ, ಶಾಲಾ-ಕಾಲೇಜುಗಳಿಗೆ ತೆರಳಲು ಕಷ್ಟಪಡಬೇಕಾಯಿತು. ಒಂದು ಕಡೆ ಟ್ರಾಫಿಕ್‌ ಜಾಮ್‌ ಎದುರಾಗುವ ಕಾರಣಕ್ಕೆ ಬಹುತೇಕ ದ್ವಿಚಕ್ರ ವಾಹನ ಸವಾರರು ಮಳೆ ಹಾಗೂ ಟ್ರಾಫಿಕ್‌ ಕಾರಣಕ್ಕೆ ಸುರಕ್ಷಿತ ದೃಷ್ಟಿಯಿಂದ ಮೆಟ್ರೋ ಮೊರೆ ಹೋಗಿದ್ದರು.

ಸಕ್ಕರೆನಾಡು ಮಂಡ್ಯದಲ್ಲಿ ವಾಹನ ಸಂಚಾರ ಅಸ್ತವ್ಯಸ್ತ
ಮಂಡ್ಯ ಜಿಲ್ಲೆಯಲ್ಲಿ ಮುಂಜಾನೆಯಿಂದಲೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎಡೆಬಿಡದೆ ಸುರಿಯುತ್ತಿರುವ ತುಂತುರು ಮಳೆಗೆ ವಾಹನ ಸಂಚಾರ ಮಾಡಲು ಆಗದೇ ಜನರು ಪರದಾಡಬೇಕಾಯಿತು. ಮಳೆ ನಡುವೆಯೇ ಕಚೇರಿ, ಶಾಲಾ- ಕಾಲೇಜಿಗೆ ತೆರಳುತ್ತಿರುವ ಚಿತ್ರಣ ಕಂಡು ಬಂತು.

ರಾಮನಗರದಲ್ಲಿ ಮಂಜಿನ ಹೊಂದಿಕೆ

ವಿದ್ಯಾರ್ಥಿಗಳ ಪರದಾಟ
ಬಯಲು ಸೀಮೆ ರಾಮನಗರವು ಅಕ್ಷರಶಃ ಮಲೆನಾಡಿನಂತಾಗಿತ್ತು. ಕರಗದ ದಟ್ಟ ಮಂಜು, ತುಂತುರು ಮಳೆಗೆ ವಾಹನ ಸವಾರರು ಹೈರಣಾದರು. ಮಳೆಯಿಂದ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡಬೇಕಾಯಿತು. ಶಾಲೆಗೆ ಹೋಗುವ ಮಕ್ಕಳು ರೈನ್‌ ಕೋಟ್‌, ಕೊಡೆಗಳ ಮೊರೆಹೋಗಿದ್ದರು. ಆ ಮಳೆ ನಡುವೆಯೇ ಶಾಲೆಗಳಿಗೆ ತೆರಳುವಂತಾಯಿತು.

ಇದನ್ನೂ ಓದಿ | ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್, ರಾಜಧಾನಿಯಲ್ಲಿ ತುಂತುರು ಮಳೆ

Exit mobile version