Site icon Vistara News

ಮಳೆರಾಯನ ಆರ್ಭಟಕ್ಕೆ ಯಾದಗಿರಿಯಲ್ಲಿ ಮೊದಲ ಬಲಿ; ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

Rain

Rain In Yadgir: Man Dies After Falling From A Lodge In The City

ಯಾದಗಿರಿ: ರಾಜ್ಯದ ಹಲವೆಡೆ ಮಳೆಯ (Rain News) ಆರ್ಭಟ ಮುಂದುವರಿದಿದೆ. ಅದರಲ್ಲೂ, ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಮೊದಲ ಬಲಿಯಾಗಿದೆ. ಯಾದಗಿರಿ ನಗರದಲ್ಲಿರುವ (Yadgir City) ಲಾಡ್ಜ್‌ ಒಂದರ ಮೇಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಲಾಡ್ಜ್‌ ಮೇಲೆ ನೀರು ನಿಂತಿದ್ದು, ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನಗರದಲ್ಲಿ ಶನಿವಾರ (ಏಪ್ರಿಲ್‌ 20) ಭಾರಿ ಮಳೆಯಾಗಿದೆ. ಇದರಿಂದಾಗಿ ನಗರದ ಆಶ್ರಯ ಲಾಡ್ಜ್‌ ಮೇಲೆ ನೀರು ಸಂಗ್ರಹವಾಗಿತ್ತು. ಲಾಡ್ಜ್‌ನಲ್ಲಿ ಬಟ್ಟೆ ತೊಳೆಯುವ ಕೆಲಸ ಮಾಡುತ್ತಿದ್ದ ಅಶೋಕ್‌ ಕಟ್ಟಿಮನಿ (40) ಎಂಬುವರು ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಲಾಡ್ಜ್‌ ಮೇಲೆ ತೆರಳಿದ್ದರು. ನೀರು ಸರಾಗವಾಗಿ ಹರಿಯುವಂತೆ ಮಾಡಲು ಅವರು ಚಾವಣಿ ಮೇಲೆ ಹೋಗಿದ್ದರು. ಇದೇ ವೇಳೆ ಕಾಲು ಜಾರಿ ಬಿದ್ದು ಅವರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಯಾದಗಿರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಯಾದಗಿರಿಯಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕೆಲ ಕಟ್ಟಡಗಳು ಕೂಡ ಕುಸಿದಿವೆ. ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಜನ ಮಳೆಗಾಗಿ ಕಾಯುತ್ತಿದ್ದಾರೆ. ಆದರೆ, ಯಾದಗಿರಿಯಲ್ಲಿ ಮಳೆಯೇ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ.

ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಗುಡುಗು, ಸಿಡಿಲಿನ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಕಲಬುರಗಿ, ವಿಜಯಪುರ ಸೇರಿ ಮಲೆನಾಡಿನ ಚಿಕ್ಕಮಗಳೂರು, ಕೊಡಗಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೀದರ್, ಕೊಪ್ಪಳ, ಯಾದಗಿರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳದ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಹಾಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಮಧ್ಯಮ ಮಳೆಯಾಗಲಿದೆ. ರಾಜ್ಯದ ಉಳಿದೆಡೆ ಒಣಹವೆ ಇರುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Weather: ಭಾರಿ ಮಳೆಗೆ ಕುಸಿದು ಬಿದ್ದ ಮನೆ ಚಾವಣಿ; ಅಪಾರ ಹಾನಿ

Exit mobile version