ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಅಲ್ಲೋಲಕಲ್ಲೋಲಗೊಳಿಸಿದ ಭಾನುವಾರ ರಾತ್ರಿಯ ಮಳೆ ಕಳೆದ ಎಂಟು ವರ್ಷಗಳಲ್ಲೇ ದಾಖಲೆ ಸೃಷ್ಟಿಸಿದ ವರ್ಷಧಾರೆಯಾಗಿದೆ. ಭಯ ಹುಟ್ಟಿಸುವ ಮತ್ತೊಂದು ಸಂಗತಿ ಎಂದರೆ ರಾಜಧಾನಿಯಲ್ಲಿ ಸೋಮವಾರ ರಾತ್ರಿಯೂ ಇದೇ ರೀತಿ ಮಳೆ ಸುರಿಯುವ ಮುನ್ಸೂಚನೆ ಇದ್ದು, ಬೆಂಗಳೂರಿಗೆ ವಸ್ತುಶಃ ಜಲ ಕಂಟಕ ಎದುರಾಗುವ ಅಪಾಯವಿದೆ.
ಭಾನುವಾರ ರಾತ್ರಿಯಿಂದ ಬೆಳಗ್ಗಿನ ವರೆಗೆ ಬೆಂಗಳೂರಿನಲ್ಲಿ ಬಿದ್ದಿರುವ ಮಳೆ ಪ್ರಮಾಣ ೧೩ ಸೆಂಟಿ ಮೀಟರ್. ಟರ್ಫ್ ಸೃಷ್ಟಿಯಾದ ಪರಿಣಾಮವೇ ಈ ಮಳೆ ಎಂದು ಹವಾಮಾನ ಇಲಾಖೆ ಹೇಳಿದೆ. ೨೦೧೪ರಲ್ಲಿ ಬೆಂಗಳೂರಿನಲ್ಲಿ ಒಂದೇ ದಿನ ೧೩ ಸೆಂ.ಮೀ. ಮಳೆ ಬಿದ್ದ ಬಳಿಕ ಮೊದಲ ಬಾರಿಗೆ ಇಷ್ಟೊಂದು ಮಳೆಯಾಗಿದೆ. ಹಾಗಂತ ಬೆಂಗಳೂರಿನಲ್ಲಿ ಇಷ್ಟೊಂದು ಮಳೆ ಬರುತ್ತಿರುವುದು ಇದು ಹೊಸತೇನೂ ಅಲ್ಲ. 1988ರಲ್ಲಿ ನಗರದಲ್ಲಿ ಒಂದೇ ದಿನ ೧೮ ಸೆಂಟಿಮೀಟರ್ ಸಪ್ಟೆಂಬರ್ ನಲ್ಲಿ ದಾಖಲೆ ಮಳೆ ಬಿದ್ದಿತ್ತು.
ಸಂಪಂಗಿ ರಾಮ ನಗರದಲ್ಲಿ ೧೪.೮ ಸೆಂ.ಮೀ. ಮಳೆ!
ರಾಜಧಾನಿಯಲ್ಲಿ ಭಾನುವಾರ ಬಿದ್ದ ಮಳೆಯ ರಭಸ ಮತ್ತು ದೀರ್ಘಾವಧಿಯಲ್ಲಿ ಬಿದ್ದ ಮಳೆಯ ಹೊಡೆತ ಯಾವ ರೀತಿ ಇತ್ತೆಂದರೆ ಸಂಪಂಗಿ ರಾಮನ ನಗರದಲ್ಲಿ ೧೪೮ ಮಿ.ಮೀ. ಮಳೆ ಬಿದ್ದಿದೆ. ವರ್ತೂರಿನಲ್ಲಿ 142 ಮಿ.ಮೀ., ಪುಲಕೇಶಿ ನಗರದಲ್ಲಿ 139 ಮಿ.ಮೀ., ಗುಟ್ಟಳ್ಳಿಯಲ್ಲಿ 13೮ ಮಿ.ಮೀ, ದೊಡ್ಡನಕುಂಟೆಯಲ್ಲಿ ೧೩೩ ಮಿ.ಮೀ, ಮಾರತಹಳ್ಳಿಯಲ್ಲಿ ೧೨೯ ಮಿ.ಮೀ., ಕೋನೇನ ಅಗ್ರಹಾರದಲ್ಲಿ ೧೧೪ ಮಿ.ಮೀ., ಹಂಪಿ ನಗರದಲ್ಲಿ ೧೦೪ ಮಿ.ಮೀ. ಮಳೆ ಬಿದ್ದಿದೆ.
ಬೆಂಗಳೂರಿನಲ್ಲಿ ಇಂದೂ ಯೆಲ್ಲೋ ಅಲರ್ಟ್
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಕೊಡಗು, ಹಾಸನ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರಿನಲ್ಲಿ ಆರೆಂಜ್ ಅಲರ್ಟ್ ಇದೆ.
ಇದನ್ನೂ ಓದಿ| Rain news | ದಾಖಲೆಯ ಮಳೆಗೆ ತತ್ತರಿಸಿದ ಬೆಂಗಳೂರು, ಜನಜೀವನ ಅಸ್ತವ್ಯಸ್ತ