ಕಾರವಾರ: ಕರಾವಳಿ ಭಾಗದಲ್ಲಿ ಮುಂಗಾರು ಮಳೆ (Rain News) ಅಬ್ಬರಿಸುತ್ತಿದೆ. ಕಳೆದ ಎರಡು – ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಹೆದ್ದಾರಿ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ. ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಗುಡ್ಡ ಕುಸಿತ, ಬಂಡೆ ಕುಸಿತಗಳು ಸಂಭವಿಸುತ್ತಿವೆ. ಈಗ ಬುಧವಾರ (ಜೂನ್ 28) ಹೆದ್ದಾರಿ ಟನಲ್ ಬಳಿ ಗುಡ್ಡದ ಮಣ್ಣು ಕುಸಿತವಾಗಿದ್ದು (landslide), ಸಂಚಾರಕ್ಕೆ ಭಾರಿ ತೊಂದರೆಯಾಗಿದೆ.
ಕಾರವಾರದಿಂದ ಬಿಣಗಾ ಸಂಪರ್ಕಿಸುವ ಟನಲ್ ಬಳಿ ಮಣ್ಣು ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ನಿರ್ಮಾಣವಾಗಿರುವ ಟನಲ್ ಇದಾಗಿದ್ದು, ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಮಣ್ಣು ಸಡಿಲಗೊಂಡಿದ್ದೇ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ: Ambulance Service : ಜುಲೈ 8ಕ್ಕೆ ಆಂಬ್ಯುಲೆನ್ಸ್ ಡೆಡ್‌ಲೈನ್; ವೇತನ ಕೊಡ್ದೇ ಇದ್ರೆ ಸೇವೆ ಸಿಗಲ್ಲ!
ಟನಲ್‌ನ ಮುಂಬದಿ ಐಆರ್‌ಬಿ ಬ್ಯಾರಿಕೇಡ್ ಅಳವಡಿಸಿದೆ. ವಾಹನ ಸವಾರರಿಗೆ ತೊಂದರೆಯಾಗದಂತೆ ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ವಹಿಸಲಾಗಿದ್ದರೂ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ಅರ್ಧ ರಸ್ತೆ ಬಂದ್ ಮಾಡಿ ಹಂತ ಹಂತವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದೃಷ್ಟವಶಾತ್ ಯಾವುದೇ ವಾಹನ ಸವಾರರಿಗೆ ತೊಂದರೆಯಾಗಿಲ್ಲ.
ಮಣ್ಣು ತೆರವು ಕಾರ್ಯ ಶುರು
ಗುಡ್ಡದ ಮಣ್ಣು ಕುಸಿತವಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಜೆಸಿಬಿಯನ್ನು ತರಲಾಗಿದೆ. ಸದ್ಯ ಜೆಸಿಬಿ ಕಾರ್ಯಾಚರಣೆ ಮುಂದುವರಿದಿದ್ದು, ಗುಡ್ಡದ ಮೇಲಿನ ಮಣ್ಣು ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎಲ್ಲರೂ ಜಾಗ್ರತೆಯಿಂದ ವಾಹನ ಚಲಾಯಿಸಲು ಸೂಚನೆ ನೀಡಲಾಗುತ್ತಿದೆ.
ಮಂಗಳವಾರ ಅರಗಾ ಬಳಿ ಬಿದ್ದಿದ್ದ ಬಂಡೆಗಲ್ಲು
ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅರಗಾ ಗ್ರಾಮದ ಬಳಿ ಭಾರಿ ಮಳೆಗೆ ರಸ್ತೆ ಮೇಲೆ ಬೃಹತ್ ಬಂಡೆಗಲ್ಲೊಂದು ಮಂಗಳವಾರ ಕುಸಿದು ಬಿದ್ದಿತ್ತು. ಹೆದ್ದಾರಿ ಮೇಲೆ ಕಲ್ಲು, ಮಣ್ಣು ಕುಸಿತದಿಂದ ಒಂದು ಬದಿ ಸಂಚಾರ ಬಂದ್ ಆಗಿತ್ತು. ಗುಡ್ಡದ ಮಣ್ಣು ಕುಸಿಯುವ ಆತಂಕದಿಂದ ಐಆರ್‌ಬಿಯವರು ಸಂಚಾರವನ್ನು ಬಂದ್ ಮಾಡಿದ್ದರು.
ಐಆರ್‌ಬಿ ಕಂಪನಿ ಎಡವಟ್ಟು?
ಇದು ಹೆದ್ದಾರಿ ಅಗಲೀಕರಣಕ್ಕಾಗಿ ಐಆರ್‌ಬಿ ಕಂಪನಿ ಮಾಡಿದ ಎಡವಟ್ಟು ಎನ್ನಲಾಗಿದೆ. ಅಪಾಯಕಾರಿಯಾಗಿ ಗುಡ್ಡ ಕೊರೆದಿರುವುದೇ ಈ ಅವಘಡಕ್ಕೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಮುಂದೆ ಹೆಚ್ಚು ಮಳೆಯಾದಲ್ಲಿ ಅವಘಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಭಾಗದಲ್ಲಿ ಈಗ ಸಂಚರಿಸಬೇಕಾದರೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ.
ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ತಂಡ್ರಕುಳಿ ಗ್ರಾಮದಲ್ಲಿ ಸೋಮವಾರ ಸಂಜೆ ಭಾರಿ ಮಳೆ ಸುರಿದಿದ್ದು, ಗುಡ್ಡದಿಂದ ಬಂಡೆಗಲ್ಲೊಂದು ಕುಸಿದು ಮನೆಗೆ (weather report) ಅಪ್ಪಳಿಸಿತ್ತು. ಈ ಮನೆಯು ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಇದ್ದು, ಈ ಭಾಗದಲ್ಲಿ ಸಾಲು ಸಾಲು ಮನೆಗಳು ಇವೆ. ಈ ಮನೆಗಳಿಗೆ ಹೊಂದಿಕೊಂಡಿದ್ದ ಗುಡ್ಡದಿಂದ ಈಗ ಬಂಡೆಯೊಂದು ಕುಸಿದು ಗೋಡೆಗೆ ಬಡಿದಿತ್ತು.
ಇದನ್ನೂ ಓದಿ: ZP TP Elections: 10 ವಾರದೊಳಗೆ ಜಿಪಂ, ತಾಪಂ ಮೀಸಲಾತಿ ಫೈನಲ್: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಗ್ರಾಮದ ಗಣೇಶ ತುಳಸು ಅಂಬಿಗ ಎಂಬುವವರ ಮನೆಗೆ ಬಂಡೆಗಲ್ಲು ಬಿದ್ದಿದ್ದು, ಅದೃಷ್ಟವಶಾತ್ ದುರಂತವೊಂದು ತಪ್ಪಿದಂತಾಗಿತ್ತು. ಬಂಡೆ ಅಪ್ಪಳಿಸಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಕುಟುಂಬಸ್ಥರು ಮನೆಯಲ್ಲಿದ್ದಾಗಲೇ ಈ ಅವಘಡ ನಡೆದಿದೆ. ಅಲ್ಲದೆ, ಈಗ ಈ ಭಾಗದ ಜನರು ಗುಡ್ಡ ಕುಸಿತದ ಆತಂಕದಲ್ಲಿದ್ದಾರೆ.