Site icon Vistara News

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ಬಾಲಕ, ಮಹಿಳೆ ದುರ್ಮರಣ

Rain News

ಗದಗ/ಕೊಪ್ಪಳ: ಎರಡು ಪ್ರತ್ಯೇಕ ಮಳೆ ಅವಘಡಗಳಲ್ಲಿ ಸಿಡಿಲು ಬಡಿದು ಬಾಲಕ ಮತ್ತು ಮಹಿಳೆ ದುರ್ಮರಣ ಹೊಂದಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾಗಿದ್ದರೆ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಕುರಿ ಮೇಯಿಸಲು ಹೋದ ಬಾಲಕ ಸಾವು

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬಂಡೆಮ್ಮ ನಗರ ಗ್ರಾಮದ ಬಳಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಕುರಿ ಮೇಯಿಸಲು ಹೋಗಿದ್ದ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಈ ವೇಳೆ ಮರದ ಬಳಿ ನಿಂತಾಗ ಅವಘಡ ನಡೆದಿದೆ. ಗುಡ್ಡದಕೇರಿ ಬಡಾವಣೆಯ ನಿವಾಸಿ ಯಲ್ಲಪ್ಪ ಕಿಲೀಕೈ (17) ಮೃತ ಬಾಲಕ. ಪರಸಪ್ಪ ಕಿಲೀಕೈ (15) ಗಾಯಾಳುವಾಗಿದ್ದು, ಆತನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಿಡಿಲಿಗೆ ರೈತ ಮಹಿಳೆ ಬಲಿ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜೆ ರಾಂಪುರದಲ್ಲಿ ಸಿಡಿಲು ಬಡಿದು ರೈತ ಮಹಿಳೆ ರತ್ನಮ್ಮ ಓತಗೇರಿ(43) ಎಂಬುವವರು ಮೃತಪಟ್ಟಿದ್ದಾರೆ. ಹೊಲಕ್ಕೆ ರತ್ನಮ್ಮನೊಂದಿಗೆ ಆಕೆಯ ಅಕ್ಕ ದೇವಮ್ಮ ಸಹ ಹೋಗಿದ್ದರು. ಮಳೆ ಆರಂಭವಾಗುತ್ತಿದ್ದಂತೆ ದೇವಮ್ಮ ಮನೆ ಸೇರಿದ್ದರು. ಆದರೆ ಹೊಲದಲ್ಲಿದ್ದ ರತ್ನಮ್ಮಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Karnataka Weather : ಭಾರಿ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್‌ ಪಾಸ್‌ ಜಲಾವೃತ; ಇನ್ನೈದು ದಿನ ಭಾರಿ ವರ್ಷಧಾರೆ

ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಮನೆಗಳಿಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಹಲ್ಲೆ!

ಗದಗ: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಮನೆಗಳಿಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಹಲ್ಲೆ ಮಾಡಿದ್ದರಿಂದ ಇಬ್ಬರು ಮಹಿಳೆಯರು ಸೇರಿ ಐವರು ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ಸಣ್ಣ ತಾಂಡಾದಲ್ಲಿ ನಡೆದಿದೆ.

ಜಮೀನು ಬದು ವಿಷಯಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿದ್ದು, ಏಕಾಏಕಿ ಮನೆಗಳಿಗೆ ನುಗ್ಗಿ ಒಂದು ಗುಂಪು ದಾಳಿ ಮಾಡಿದೆ. ಕಳೆದ ಕೆಲ ದಿನದ ಹಿಂದೆಯೇ ಜಮೀನು ವಿವಾದ ಠಾಣೆ ಮೆಟ್ಟಿಲೇರಿತ್ತು. ಆಗ ಹಿರಿಯರ ಮಧ್ಯಸ್ಥಿಕೆಯಲ್ಲಿ ಗಲಾಟೆ ಬಗೆಹರಿದತ್ತು. ಈಗ ಮತ್ತೆ ಏಕಾ ಏಕಿ ಗಲಾಟೆ ಮಾಡಿ, ಐವರ ಮೇಲೆ ಹಲ್ಲೆ ಮಾಡಲಾಗಿದೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Exit mobile version