ಬೆಂಗಳೂರು: ಮಳೆ ಬಂದರೂ ಕಷ್ಟ ಬಾರದೇ ಇದ್ದರೂ ನಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಾದ್ಯಂತ ಮಳೆಯ ಅಬ್ಬರ (Rain News) ಜೋರಾಗಿದ್ದು, ಹಲವು ಕಡೆ ಜನಜೀವನ ದುಸ್ಥರವಾಗಿದೆ. ಸತತ ಮಳೆಗೆ ಹಲವೆಡೆ ಮನೆಗಳು ಕುಸಿತಕಂಡಿದ್ದರೆ, ಮತ್ತೆ ಕೆಲವು ಕಡೆ ಬೆಳೆ ನಾಶ, ಗೋಡೆ ಕುಸಿದು ಸಾವು, ಮನೆಗಳಿಗೆ ನೀರು ನುಗ್ಗಿದ ಘಟನೆಗಳು ನಡೆದಿವೆ.
ರಾಯಚೂರಿನಲ್ಲಿ ತಡರಾತ್ರಿ ವರುಣನ ಅಬ್ಬರಕ್ಕೆ ಮನೆಗೆ ಮಳೆ ನೀರು ನುಗ್ಗಿದ ಪರಿಣಾಮ ಬಾಣಂತಿ ಹಾಗೂ ಮಗುವೊಂದು ಸಂಕಷ್ಟಕ್ಕೆ ಸಿಲುಕಿತ್ತು. ನಗರದ ಸಿಯಾತಲಾಬ್ 38ನೇ ವಾರ್ಡ್‌ನಲ್ಲಿ ಬಾಣಂತಿ ಪಲ್ಲವಿ ಮನೆಯಿಂದ ಹೊರಬರಲು ಆಗದೇ ಪರದಾಡಬೇಕಾಯಿತು. ಮನೆಯೊಳಗೆ ಚರಂಡಿ ಮಿಶ್ರಿತ ಮಳೆ ನೀರು ೨ ಅಡಿಗೂ ಹೆಚ್ಚು ನಿಂತು ರಾತ್ರಿಯಿಡೀ ತಾಯಿ-ಮಗು ಕಳೆಯುವಂತಾಯಿತು.
ಹಾರಿ ಹೋಯ್ತು ಪ್ರಾಣಪಕ್ಷಿ
ಧಾರಾಕಾರ ಮಳೆಗೆ ಸಾವು-ನೋವುಗಳು ಮುಂದುವರಿದಿದ್ದು, ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದು ವೃದ್ಧೆ ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಸುಧಾಬಾಯಿ ಕಾವೇರಿ (೮೦) ಮೃತ ದುರ್ದೈವಿ. ಸ್ಥಳಕ್ಕೆ ಬಾಗಲಕೋಟೆ ನಗರಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ಕಾರ್ಯಾಚರಣೆ ಮೃತದೇಹವನ್ನು ಹೊರತೆಗೆದಿದ್ದಾರೆ.
ಇತ್ತ ಗದಗನ ಬೆಟಗೇರಿ ಕನ್ಯಾಳ ಅಗಸಿ ಬಳಿ ಮಣ್ಣಿನ ಗೋಡೆ ಕುಸಿದು ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅಡವಯ್ಯ ಕಲ್ಮಠ (೬೫), ಶಿವಸಮ್ಮ ಅಡವಯ್ಯ ಕಲ್ಮಠ (೫೬), ಬಸಮ್ಮ ಬಸಯ್ಯ ನಡಕಟ್ಟಿ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಮಣ್ಣನಡಿ ಸಿಲುಕಿದವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಳೆಗೆ ಬೆಳೆ ನಾಶ-ರೈತರು ಕಂಗಾಲು
ಕೊಪ್ಪಳದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ ಮತ್ತೊಂದು ಕಡೆ ನಿರಂತರ ಮಳೆಯಿಂದ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ಈರುಳ್ಳಿ ಬೆಳೆ ಕಟಾವಿಗೂ ಮುನ್ನವೇ ಕೊಳೆಯುತ್ತಿರುವುದು ಕಂಡು ಬಂತು. ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಪರಿಹಾರ ನೀಡಲು ರೈತರು ಒತ್ತಾಯಿಸಿದರು. ಬೋಚನಹಳ್ಳಿಯ ಉಮೇಶ್ ಎಂಬುವವರಿಗೆ ಸೇರಿದ ನಾಲ್ಕು ಎಕರೆ ಈರುಳ್ಳಿ ಬೆಳೆ ನಾಶವಾಗಿ ಕಟಾವಿಗೂ ಅವಕಾಶ ಕೊಡದಂತೆ ಮಳೆ ಸುರಿಯುತ್ತಿದೆ. ಇತ್ತ ಕಡೂರು ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು 80ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿತ್ತು.
ಜೆಸಿಬಿಯ ಬಕೆಟ್‌ನಲ್ಲಿ ನಿಂತು ಹಳ್ಳ ದಾಟಿದ ಜನರು
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಂಡ್ರಗಲ್ ಗ್ರಾಮದಲ್ಲಿ ಜೆಸಿಬಿ ಬಕೆಟ್‌ನಲ್ಲಿ ನಿಂತು ಜನರು ಹಳ್ಳದ ದಾಟಿದ ವಿಡಿಯೊ ವೈರಲ್ ಆಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬಂಡ್ರಗಲ್ ಹಳ್ಳ, ಜಾತಿಗ್ಯಾನ ಹಳ್ಳ ಉಕ್ಕಿ ಹರಿಯುತ್ತಿದ್ದು, ಪ್ರವಾಹವನ್ನು ಲೆಕ್ಕಿಸದೇ ಜೆಸಿಬಿ ಬಕೆಟ್‌ನಲ್ಲಿ ನಿಂತು ಜನರು ಹಳ್ಳ ದಾಟುವ ಹುಚ್ಚು ಸಾಹಸ ಮೆರೆದಿದ್ದಾರೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಡೋಣಿ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಳೆಯ ಕಾರಣ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರೆ ಮತ್ತೊಂದು ಕಡೆ ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಪರಿಣಾಮ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ, ದೇವರಹಿಪ್ಪರಗಿ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ಪ್ರವಾಹ ಭೀತಿ ಹೆಚ್ಚಿದೆ.
ಮಳೆ ನಿಂತರೂ ಅವಾಂತರ ಮಾತ್ರ ಕಡಿಮೆ ಆಗುತ್ತಿಲ್ಲ. ಕೆರೆ ಕೋಡಿ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದ ಘಟನೆ ದಾವಣಗೆರೆ ತಾಲೂಕಿನ ಗುಡಾಳು ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಗ್ರಾಮದ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿರುವ ಸಾಮಗ್ರಿಗಳು, ದವಸ ಧಾನ್ಯ ನೀರುಪಾಲಾಗಿದೆ. ಸರಾಗವಾಗಿ ನೀರು ಹರಿದು ಹೋಗುವಂತೆ ಕಾಲುವೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Rain News | ಬೆಳಗಾವಿಯಲ್ಲಿ ಭಾರಿ ಮಳೆ: ಮನೆ ಗೋಡೆ ಕುಸಿದು ತಾಯಿ, ಮಗು ಸ್ಥಳದಲ್ಲೇ ಮೃತ್ಯುವಶ