ಬೆಂಗಳೂರು : ಉತ್ತರಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿಗಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ವರುಣನ ಆರ್ಭಟಕ್ಕೆ ನದಿ ಪಾತ್ರದ ಹಲವೆಡೆ ಪ್ರವಾಹ ಪರಿಸ್ಥಿತಿ ಇನ್ನಷ್ಟು ಗಂಭೀರತೆ ಪಡೆದುಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ತುಂತುರು ಮಳೆ (Rain News) ಜತೆ ದಿಢೀರ್ ಚಳಿ ಶುರುವಾಗಿದೆ.
ಹಾಸನ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಬೆಳೆಗಳು ನಾಶಗೊಂಡಿವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು ಬೆಳಗಾವಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿರುವ ಜಲಪಾತಗಳು ಮೈದುಂಬಿ ಧುಮ್ಮುಕ್ಕುತ್ತಿವೆ. ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಚಿಕ್ಕಮಗಳೂರು, ಉತ್ತರಕನ್ನಡ ಹಾಗೂ ಕೊಡಗಿನಲ್ಲಿ ಶುಕ್ರವಾರವೂ (ಜು.08) ಶಾಲಾ ಕಾಲೇಜಿಗೆ ರಜೆ ಮುಂದುವರಿದಿದೆ.
ಉತ್ತರಕನ್ನಡದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ತತ್ತರಿಸಿದೆ. ಗುರುವಾರ ರಾತ್ರಿ (ಜು.7)ಎಡಬಿಡದೇ ಧಾರಾಕಾರವಾಗಿ ಮಳೆ ಸುರಿದಿದೆ. ನದಿ ಪಾತ್ರದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ | Rain News | ಬೇಡಿಕೆ ಕುಸಿತ, ರಾಯಚೂರು ಶಾಖೋತ್ಪನ್ನ ಕೇಂದ್ರದ 6 ಘಟಕಗಳು ಸ್ಥಗಿತ
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಅಘನಾಶಿನಿ, ಗಂಗಾವಳಿ, ಬಡಗಣಿ, ಶರಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಕುಮಟಾ ತಾಲೂಕಿನ ಊರುಕೇರಿ, ಬಡಗಣಿ, ಹೆಗಡೆ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೊನ್ನಾವರ ತಾಲೂಕಿನ ಗುಂಡಬಾಳ, ಹಡಿನಬಾಳ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಗೋಕಾಕ್ ಫಾಲ್ಸ್‌ಗೂ ಅಪಾರ ಪ್ರಮಾಣದ ನೀರು
ಬೆಳಗಾವಿ ನಗರದಿಂದ 60 ರಿಂದ 65 ಕೀ.ಮಿ ಅಂತರದಲ್ಲಿರುವ ಗೋಕಾಕ್ ಫಾಲ್ಸ್‌ಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆ ಆಗಿದ್ದು, ಮುಂದಿನ 3 ರಿಂದ 5 ದಿನ ಬೆಳಗಾವಿಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ
ಕೊಡಗು ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾರಂಗಿ ಜಲಾಶಯ ಪ್ರದೇಶದಲ್ಲೂ ಭಾರಿ ಮಳೆ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳ ಕಂಡಿದೆ.
ಇದನ್ನೂ ಓದಿ | ಮಳೆಗೆ ಸಂಪೂರ್ಣ ಮನೆ ಹಾನಿಯಾದರೆ ₹5 ಲಕ್ಷ, ಭಾಗಶಃ ಹಾನಿಯಾದರೆ ₹50 ಸಾವಿರ ಪರಿಹಾರ: ಸಚಿವ ಆರ್.ಅಶೋಕ್
ರುದ್ರಪಟ್ಟಣದ ಈಶ್ವರ ದೇಗುಲ ಸಂಪೂರ್ಣ ಜಲಾವೃತ
ಹಾಸನ ಜಿಲ್ಲೆಯಲ್ಲಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು ನೂರಾರು ಎಕರೆ ಬೆಳೆಗಳು ಜಲಾವೃತಗೊಂಡಿವೆ. ನದಿ ದಂಡೆಯಲ್ಲಿದ್ದ ಅರಕಲಗೂಡು ತಾಲೂಕಿನ ರುದ್ರಪಟ್ಟಣದ ಈಶ್ವರ ದೇಗುಲ ಸಂಪೂರ್ಣ ಜಲಾವೃತಗೊಂಡಿವೆ. ಬೆಳೆ ಹಾನಿ ಪ್ರದೇಶಗಳಿಗೆ ಸ್ಥಳೀಯ ಕಂದಾಯ ನಿರೀಕ್ಷಕ ಸ್ವಾಮಿ ನೇತೃತ್ವದ ತಂಡ ಭೇಟಿ ನೀಡಿದೆ. ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಬೆಳೆಗಳು ಹಾಳಾಗಿವೆ.
ಬೆಂಗಳೂರಿನಲ್ಲಿ ದಿಢೀರ್ ಚಳಿ
ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದರೆ, ಬೆಂಗಳೂರಿನಲ್ಲಿ ತುಂತುರು ಮಳೆಯಿಂದ ಉಷ್ಣತೆ ಇಳಿಕೆ ಕಂಡಿದೆ. ನಗರದ ಜನತೆಗೆ ಮೂರ್ನಾಲ್ಕು ದಿನಗಳಿಂದ ಚಳಿಗಾಲದ ಅನುಭವ ಆಗಿದ್ದು, ಜೂನ್ ಅಂತ್ಯದಲ್ಲಿ 30ಡಿಗ್ರಿ ಸೆಲ್ಸಿಯಸ್ ನಷ್ಟಿದ್ದ ನಗರದ ಉಷ್ಣಾಂಶ ಈಗ 20 ಡಿಗ್ರಿ ಸೆಲ್ಸಿಯಸ್ ಆಗಿದೆ.
ನಗರದಲ್ಲಿ ಇನ್ನೆರಡು ದಿನಗಳಲ್ಲಿ ತಂಪಾದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ 24 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ | Rain News | ರಾಜ್ಯದಲ್ಲಿ ಸತತ ಮಳೆ, ಭರ್ತಿಯತ್ತ ಸಾಗಿದ ಪ್ರಮುಖ ಜಲಾಶಯಗಳು