Site icon Vistara News

Rain News: ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

Rain News

ಯಾದಗಿರಿ: ಮಳೆ ಅವಾಂತರಕ್ಕೆ ನಾಲ್ಕು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಚಪೆಟ್ಲಾ ರಸ್ತೆ ಬದಿ ನಡೆದಿದೆ. ಬಾಲಕಿ ಮನಸ್ವಿ ತಿಪ್ಪಣ್ಣ ಯಾದವ್ ಮೃತ ಬಾಲಕಿ. ಮನೆ ಶೀಟ್‌ ಮೇಲೆ ಇಟ್ಟಿದ್ದ ಕಲ್ಲು ತಲೆ ಮೇಲೆ ಬಿದ್ದಿದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆ.

ಜಮೀನಿನ ಶೀಟ್‌ ಮನೆಯಲ್ಲಿ ಪೋಷಕರ ಜತೆ ಬಾಲಕಿ ವಾಸವಾಗಿದ್ದಳು. ಬಿರುಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಮನೆ ಶೀಟ್‌ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಸ್ಥಳದಲ್ಲಿ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ವಿಜಯನಗರ/ರಾಯಚೂರು/ಯಾದಗಿರಿ: ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ವರುಣ ಶಾಕ್‌ (Karnataka Rain) ಕೊಟ್ಟಿದ್ದಾನೆ. ರಾಜ್ಯ ಹಲವೆಡೆ ಬಿರುಗಾಳಿ ಸಹಿತ (Karnataka weather Forecast) ಮಳೆಯಾಗುತ್ತಿದ್ದು, ಪ್ರತ್ಯೇಕ ಕಡೆಗಳಲ್ಲಿ ಸಿಡಿಲು ಬಡಿದು ಕಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಮೃತಪಟ್ಟಿವೆ.

ವಿಜಯನಗರದ ಹೂವಿನಹಡಗಲಿ ತಾಲೂಕಿನ ಎಂ.ಕಲ್ಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ. ಕೆಂಚನಗೌಡ್ರ ಬಸವರಾಜ ಎಂಬ ರೈತ ಎಮ್ಮೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಮಳೆಯೊಂದಿಗೆ ಗುಡುಗು, ಸಿಡಿಲು ಬಡಿದ ಪರಿಣಾಮ ಎಮ್ಮೆ ಮೃತಪಟ್ಟಿದೆ.

ಇನ್ನೂ ರಾಯಚೂರಿನ ಲಿಂಗಸುಗೂರಿನ ಕರೆಮರಡಿ ತಾಂಡದಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಮೃತಪಟ್ಟಿದೆ. ಲಕ್ಷಣ್ಣ ಗುಂಡಪ್ಪ ರಾಠೋಡ ಎಂಬುವವರ ಎಮ್ಮೆಯನ್ನು ಮನೆ ಪಕ್ಕದಲ್ಲಿರುವ ಮರಕ್ಕೆ ಕಟ್ಟಿಹಾಕಿದ್ದರು. ಗುಡುಗು ಮಿಂಚು ಸಹಿತ ಸುರಿದ ಮಳೆ ವೇಳೆ ಸಿಡಿಲು ಬಡಿದ್ದರಿಂದ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಮುದಗಲ್ ಠಾಣೆ ಪೊಲೀಸ್ ಸಿಬ್ಬಂದಿ ಹಾಗೂ ನಾಗಲಾಪೂರು ಪಶು ಆಸ್ಪತ್ರೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರುಣನ ಅಬ್ಬರಕ್ಕೆ ಕೆರೆಯಂತಾದ ಗುರುಮಠಕಲ್‌

ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಗುರುಮಠಕಲ್ ಹಾಗೂ ಯಾದಗಿರಿ ನಗರದಲ್ಲಿ ಕಳೆದ ಅರ್ಧ ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದ. ಭಾರಿ ಮಳೆಗೆ ಗುರುಮಠಕಲ್ ರಸ್ತೆ ಮೇಲೆ ನೀರು ಹರಿದು ಕೆರೆಯಂತಾಗಿತ್ತು. ಇತ್ತ ಬಿರುಗಾಳಿ ಸಹಿತ ಭಾರಿ ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ಯಾದಗಿರಿ ತಾಲೂಕಿನ ಗಣಾಪುರ ಸಮೀಪದ ಯಾದಗಿರಿ-ಗುರುಮಠಕಲ್ ರಸ್ತೆ ಮಾರ್ಗದಲ್ಲಿ ಮರಗಳು ಧರೆಗುರುಳಿತ್ತು.

ಯಾದಗಿರಿಯ ಗಣಾಪುರ ಸಮೀಪದ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಮರಗಳು ಬಿದ್ದಿತ್ತು. ಗುರುಮಠಕಲ್-ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಮರಗಳು ಉರುಳಿ ಬಿದ್ದಿತ್ತು. ಹೀಗಾಗಿ ಸ್ಥಳೀಯರು ಹಾಗೂ ಸವಾರರಿಂದಲೇ ರಸ್ತೆ ಮೇಲೆ ಬಿದ್ದಿದ್ದ ಮರಗಳ ತೆರವು ಮಾಡಲಾಯಿತು. ಮರಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಂಡರು. ರಸ್ತೆ ಮೇಲೆ ಮರಗಳು ಬಿದ್ದ ಕಾರಣದಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು.

Exit mobile version