Site icon Vistara News

Rain news | ಬೆಂಗಳೂರಿನಲ್ಲಿ ಅಕ್ಟೋಬರ್‌ ಅಂತ್ಯದವರೆಗೂ ಮಳೆ ಕಾಟ, ಮತ್ತೆ ಮತ್ತೆ ಪ್ರವಾಹ ಭೀತಿ

Bangalore rains

ಬೆಂಗಳೂರು: ರಾಜಧಾನಿಯ ನಾಗರಿಕರು ಇನ್ನು ಎರಡು ತಿಂಗಳು ನೆಮ್ಮದಿಯಿಂದ ನಿದ್ದೆ ಮಾಡುವಂತಿಲ್ಲ. ಯಾಕೆಂದರೆ, ಅಕ್ಟೋಬರ್‌ ಅಂತ್ಯದವರೆಗೂ ಈ ಬಾರಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬೀಳುವ ಮಳೆ ಪ್ರಮಾಣ ವರ್ಷಕ್ಕೆ ಸರಾಸರಿ ೧೦೦೦ದಿಂದ ೧೨೦೦ ಮಿ.ಮೀ. ಮಳೆ ಬೀಳುತ್ತದೆ. ಆದರೆ, ಈ ವರ್ಷ ಆಗಸ್ಟ್‌ ೩ರವರೆಗೆ ೯೪೬ ಮಿ.ಮೀ. ಮಳೆ ಬಿದ್ದಿದೆ. ಭಾನುವಾರ ರಾತ್ರಿ ಬಿದ್ದ ಮಳೆ ಪ್ರಮಾಣವೇ ೧೩೦ ಮಿ.ಮೀ.! ಇನ್ನೂ ಎರಡು ತಿಂಗಳು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಂದರೆ, ಈ ಬಾರಿ ಸರಾಸರಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚುವರಿಯಾಗಿ ಮಳೆ ಬೀಳಲಿದೆ. ಮತ್ತು ಬೆಂಗಳೂರು ಪದೇಪದೇ ಮುಳುಗಡೆಯ ಭೀತಿ ಎದುರಿಸಲಿದೆ.

ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ, ಕಳೆದ ವರ್ಷ ಬೆಂಗಳೂರಿನಲ್ಲಿ ಬಿದ್ದ ಮಳೆ ಪ್ರಮಾಣ ೧,೫೦೦ ಮಿ.ಮೀ., ೨೦೨೦ರಲ್ಲಿ ೧,೨೦೦ ಮಿ.ಮೀ ಮಳೆ ಬಿದ್ದಿತ್ತು. ೨೦೧೯ರಲ್ಲಿ ಬಿದ್ದ ಒಟ್ಟಾರೆ ಮಳೆ ಪ್ರಮಾಣವೇ ೯೦೦ ಮಿ.ಮೀ. ನಿಜವೆಂದರೆ, ಈ ಬಾರಿ ಮಾರ್ಚ್‌ ೧ರಿಂದ ಮೇ ೩೧ರವರೆಗೆ ೪೨೧ ಮಿ.ಮೀ. ಮಳೆ ಬಂದಿತ್ತು. ಜೂನ್‌ ಒಂದರಿಂದ ಮಳೆಗಾಲ ಆರಂಭ ಎಂದು ಭಾವಿಸಿದರೆ ಅಲ್ಲಿಂದ ಆಗಸ್ಟ್‌ ೩ರವರೆಗೆ ೫೨೫ ಮಿ.ಮೀ. ಮಳೆ ಬಿದ್ದಿದೆ. ಈ ವರ್ಷದಲ್ಲಿ ಒಟ್ಟು ೯೪೬ ಮಿ.ಮೀ. ಮಳೆ ಬಿದ್ದಂತಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್‌ ಬಂತೆಂದರೆ ಮಳೆ ನಿಧಾನವಾಗುತ್ತದೆ. ಆದರೆ, ಈ ಬಾರಿ ಸೆಪ್ಟೆಂಬರ್‌ ಬಳಿಕವೇ ಮಳೆ ತನ್ನ ಉಗ್ರ ರೂಪವನ್ನು ತೋರಿಸಿದೆ. ಇದು ಇನ್ನೂ ಅಕ್ಟೋಬರ್‌ ೩೧ರವರೆಗೆ ಮುಂದುವರಿದರೆ ಬೆಂಗಳೂರಿನ ಸ್ಥಿತಿ ಹೇಗಾಗಬೇಡ ಎಂದು ಕಲ್ಪಿಸಿಕೊಂಡರೇ ಭಯವಾಗುವ ಸ್ಥಿತಿ ಇದೆ.

ಶುರುವಾಗಲಿದೆ ಮಳೆಯ ಅಸಲಿ ಆಟ!
ಬೆಂಗಳೂರಿನಲ್ಲಿ ಈಗ ಬೆಳಗ್ಗಿನಿಂದ ಸಂಜೆಯವರೆಗೆ ಜೋರಾದ ಬಿಸಿಲು ಇದೆ. ಬಳಿಕ ಭಯಂಕರ ಮಳೆ ಬೀಳುತ್ತಿದೆ. ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಾಯು ಮಾಲಿನ್ಯದಿಂದಾಗಿ ತಾಪಮಾನ ವಿಪರೀತವಾಗಿ ಹೆಚ್ಚಾಗಿ ಅದರ ಪರಿಣಾಮವಾಗಿಯೇ ಇಷ್ಟೊಂದು ಮಳೆ ಬೀಳುತ್ತಿದೆ ಎನ್ನಲಾಗಿದೆ.

ಬೆಂಗಳೂರು ಎತ್ತರದ ಪ್ರದೇಶವಾಗಿರುವುದು, ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆ ಆಗುವ ವೈಪರೀತ್ಯಗಳಿಗೆ ಬಲಿಯಾಗಬೇಕಾದ ಸ್ಥಿತಿಯಿಂದಲೂ ಸಮಸ್ಯೆ ಉಂಟಾಗಿದೆ. ಸಣ್ಣ ಮಳೆಗೇ ಹೊಳೆಯಾಗುವ ಬೆಂಗಳೂರಿನಲ್ಲಿ ಹೀಗೆ ಪದೇಪದೆ ಮಳೆ ಬಂದರೆ ಅದನ್ನು ಎದುರಿಸುವುದು ಹೇಗೆ ಎನ್ನುವ ದೊಡ್ಡ ಪ್ರಶ್ನೆ ಎಲ್ಲರ ಮುಂದಿದೆ.

ಇದನ್ನೂ ಓದಿ | Rain News | 8 ವರ್ಷದ ಬಳಿಕ ದಾಖಲೆ ಮಳೆ: ಇಂದು ರಾತ್ರಿಯೂ ಕಾದಿದೆ ಬೆಂಗಳೂರಿಗೆ ಜಲ ಕಂಟಕ

Exit mobile version