ಬೆಳಗಾವಿ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ (Rain News) ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಲಿದ್ದು, ಮತ್ತೊಂದು ಬಲಿಯಾಗಿದೆ. ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಮನೆ ಗೋಡೆಯೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಹೂಲಿಕಟ್ಟಿ ಗ್ರಾಮದ ಗಂಗವ್ವ ರಾಮಣ್ಣ ಮೂಲಿಮನಿ (55) ಮೃತ ಮಹಿಳೆ. ಬೆಳಗಾವಿ ನಗರ ಸೇರಿದಂತೆ ವಿವಿಧ ಕಡೆ ವರುಣನ ಆರ್ಭಟ ಜೋರಾಗಿಯೇ ಇದೆ. ಹೂಲಿಕಟ್ಟಿ ಗ್ರಾಮದಲ್ಲಿಯೂ ಸಹ ಮಳೆ ಸಾಕಷ್ಟು ಹಾನಿ ಮಾಡಿದೆ.
ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹೂಲಿಕಟ್ಟಿ ಗ್ರಾಮದ ಮನೆಯೊಂದರ ಗೋಡೆ ಕುಸಿದಿದ್ದರಿಂದ ಮಲಗಿದ್ದ ಗಂಗವ್ವ ರಾಮಣ್ಣ ಮೂಲಿಮನಿ ಅವರಿಗೆ ತೀವ್ರ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರ ನೆರವು ಪಡೆದು ಗಂಗವ್ವರನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗೋಡೆ ಕುಸಿತದಿಂದ ಆಗಿದ್ದ ಗಾಯಗಳಿಂದ ತೀವ್ರ ರಕ್ತಸ್ರಾವವಾಗಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗಂಗವ್ವ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸಹ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | ಬೆಳಗಾವಿ | ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೆಡೆ ಎತ್ತಿದ ವೈಯಕ್ತಿಕ ದ್ವೇಷ: ವಿದ್ಯಾರ್ಥಿಯ ಬರ್ಬರ ಕೊಲೆ, ಮೂವರು ಆರೋಪಿಗಳ ಸೆರೆ