Site icon Vistara News

Rain News | ಚಾಮರಾಜನಗರದಲ್ಲಿ ಸುವರ್ಣಾವತಿ ರೌದ್ರಾವತಾರಕ್ಕೆ ಜನ ತತ್ತರ, ಅಪಾರ ಬೆಳೆ ಹಾನಿ!

chamarajanagara rain 2

ಚಾಮರಾಜನಗರ: ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ (Rain News) ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಜಿಲ್ಲೆಯಲ್ಲಿಯೂ ಸಹ ಅಪಾರ ಪ್ರಮಾಣದ ಹಾನಿಯಾಗಿದ್ದು, ಸುವರ್ಣಾವತಿ ಜಲಾಶಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಾಕಷ್ಟು ಸಮಸ್ಯೆಯಾಗಿದೆ.

ಸುವರ್ಣಾವತಿ ಜಲಾಶಯದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಚಾಮರಾಜನಗರ ತಾಲೂಕಿನ ಹೆಬ್ಬಸೂರಿನಲ್ಲಿ ಕೃಷಿ ಪ್ರದೇಶಗಳಿಗೆ ತೀವ್ರ ಹಾನಿಯಾಗಿವೆ. ಸಂಗ್ರಹಿಸಿ ಇಡಲಾಗಿದ್ದ ಸಾವಿರಾರು ತೆಂಗನ ಕಾಯಿಗಳು ನೀರಿನಲ್ಲಿ ತೇಲಿಬರುತ್ತಿವೆ.

ಜಲಾಶಯದಲ್ಲಿ ನೀರಿನ ಹರಿವಿನ ತೀವ್ರತೆ ಹೆಚ್ಚಿದ್ದು, ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದರೂ ತೆಂಗಿನಕಾಯಿಗಳನ್ನು ಹಿಡಿಯಲು ರೈತರು ನೀರಿಗೆ ಇಳಿದಿದ್ದ ದೃಶ್ಯ ಕಂಡುಬಂತು. ಕೈಗೆ ಸಿಕ್ಕ ಕಾಯಿಗಳನ್ನು ಸಂಗ್ರಹಹಿಸಿಡುವ ಮೂಲಕ ಅವುಗಳನ್ನು ಸಂರಕ್ಷಿಸಲು ಪರದಾಡಿದ್ದಾರೆ.

ಸಾವಿರಾರು ಎಕರೆ ಜಲಾವೃತ
ಸುವರ್ಣಾವತಿ ನದಿಯಲ್ಲಿ ಪ್ರವಾಹ ಉಂಟಾಗಿರುವುದರಿಂದ ಚಾಮರಾಜನಗರ ತಾಲೂಕಿನ ಆಲೂರು, ಹೊಮ್ಮ, ಕಣ್ಣೇಗಾಲ, ಬೂದಿತಿಟ್ಟು ಮೊದಲಾದ ಗ್ರಾಮಗಳ ಸಾವಿರಾರು ಎಕರೆ ಜಮಿನು ಜಲಾವೃತಗೊಂಡಿವೆ. ಬಾಳೆ, ಕಬ್ಬು, ಅರಿಶಿನ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದು, ಆಲೂರು ರಸ್ತೆ ಮೇಲೆ ಉಕ್ಕಿ ಹರಿಯುತ್ತಿದೆ. ಆಲೂರಿನಲ್ಲಿ ಪ್ರವಾಹದ ನೀರಿನಿಂದ ರೈತರಿಗೆ ತುಂಬಲಾರದ ನಷ್ಟ ಉಂಟಾಗಿದ್ದು, ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಕೋಡಿ ಹರಿಯುತ್ತಿರುವ ಕೆರೆಗಳು
ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಚಾಮರಾಜನಗರದ ಮಾಲಂಗೆರೆ, ಹರದನಹಳ್ಳಿಯ ಮರಗದಕೆರೆ, ಕರಿನಂಜನಪುರದ ದೊಡ್ಡಕೆರೆ ಚಿಕ್ಕಕೆರೆ, ಸಿಂಡಗೆರೆಯಲ್ಲಿ ಕೆರೆಗಳು ಕೋಡಿ ಬಿದ್ದಿವೆ. ಈ ಪ್ರದೇಶಗಳ ಸುತ್ತಮುತ್ತ ಇರುವ ನೂರಾರು ಎಕರೆ ಬೆಳೆ ಜಲಾವೃತಗೊಂಡಿದ್ದು, ಕಬ್ಬು, ಅರಿಶಿನ‌, ಬಾಳೆ, ಜೋಳ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿವೆ.

ಇದನ್ನೂ ಓದಿ | Rain news | ಬೆಂಗಳೂರಿನಲ್ಲಿ ಅಕ್ಟೋಬರ್‌ ಅಂತ್ಯದವರೆಗೂ ಮಳೆ ಕಾಟ, ಮತ್ತೆ ಮತ್ತೆ ಪ್ರವಾಹ ಭೀತಿ

ನದಿಪಾತ್ರದ ಗ್ರಾಮಗಳು ಜಲಾವೃತ ಆತಂಕ
ಸುವರ್ಣಾವತಿ, ಚಿಕ್ಕಹೊಳೆ ಅವಳಿ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಳಗೊಂಡಿದ್ದು, ಎರಡೂ ಜಲಾಶಯಗಳಿಂದ 14 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳು ಮತ್ತೆ ಜಲಾವೃತವಾಗುವ ಆತಂಕ ಎದುರಾಗಿದೆ. ಚಂದಕವಾಡಿ, ಕೊಡಿಮೊಳೆಗೆ ನೀರು ನುಗ್ಗಿರುವ ಪರಿಣಾಮ ಚಾಮರಾಜನಗರ ಕಾಳನಹುಂಡಿ ಸಂಪರ್ಕ ಕಡಿತವಾಗಿದೆ. ಕಾಳನಹುಂಡಿ ಬಳಿ ಸೇತುವೆಯೊಂದು ಕೊಚ್ಚಿಹೋಗಿದೆ. ಇದರಿಂದಾಗಿ ಕಾಳನಹುಂಡಿ, ನಂಜದೇವನಪುರ, ಕಲ್ಪುರ, ಹೆಗ್ಗೋಟ್ಟಾರ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆ ಇಲ್ಲವಾಗಿದೆ.

30 ವರ್ಷಗಳ ಬಳಿಕ ಉಕ್ಕಿ ಹರಿದ ನೀರು
ಮಾಲಂಗೆರೆ ಕೋಡಿ ಬಿದ್ದಿದ್ದರಿಂದ ಅವಾಂತರ ಸೃಷ್ಟಿಯಾಗಿದ್ದು, ಇದರ ಸುತ್ತಮುತ್ತಲೂ ಇರುವ ಜಮೀನುಗಳಿಗೆ ನೀರು ನುಗ್ಗಿದೆ. ಕಳೆದ 30 ವರ್ಷಗಳ ಬಳಿಕ‌ ಕೆರೆ ಉಕ್ಕಿ ಹರಿಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸಿಡಿಲು ಬಡಿದು ಮನೆಯ ಗೋಡೆ ಕುಸಿತ; ಮನೆಯಲ್ಲಿದ್ದವ ಸಾವು
ಚಾಮರಾಜನಗರ ತಾಲೂಕು ದಡದಹಳ್ಳಿಯಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿದುಬಿದ್ದಿದೆ. ಇದರಿಂದಾಗಿ ಮನೆಯಲ್ಲಿ ಮಲಗಿದ್ದ ಯುವಕರೊಬ್ಬರು ಗೋಡೆ ಅವಶೇಷದ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಮೂರ್ತಿ (33) ಮೃತ ಯುವಕ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಮೂರ್ತಿಯ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | ಚಾಮರಾಜನಗರ ಶಾಸಕ ಎನ್‌.ಮಹೇಶ್‌ಗೆ ಮಳೆಹಾನಿ ಗ್ರಾಮಸ್ಥರ ತರಾಟೆ

Exit mobile version