Site icon Vistara News

Rain News : ಮಳೆಗೆ ಗೋಡೆ ಕುಸಿದು ಯುವಕ, ವೃದ್ಧೆ ಮೃತ್ಯು; ನಿದ್ದೆಯಲ್ಲಿದ್ದ ಬಾಲಕಿ ಪವಾಡಸದೃಶ ಪಾರು

house collapse girl survived

ವಿಜಯನಗರ/ ಬೆಳಗಾವಿ/ಬಾಗಲಕೋಟೆ: ಭಾರಿ ಮಳೆಯಿಂದಾಗಿ (Rain News) ಮನೆ ಗೋಡೆ ಕುಸಿದು (House wall collapse), ಇಬ್ಬರು ಮೃತಪಟ್ಟರೆ (two dead in House collapse) ಒಬ್ಬ ಬಾಲಕಿ ಪವಾಡಸದೃಶವಾಗಿ (Girl survived) ಬದುಕುಳಿದಿದ್ದಾಳೆ. ವಿಜಯ ನಗರ (Vijayanagara News), ಬೆಳಗಾವಿ (Belagavi News) ಮತ್ತು ಬಾಗಲಕೋಟೆ (Bagalakote news) ಜಿಲ್ಲೆಯಲ್ಲಿ ಈ ಅವಾಂತರ ನಡೆದಿದೆ.

ಮನೆ ಗೋಡೆ ಕುಸಿದು ಬಿದ್ದು ವೃದ್ಧೆ ಸಾವು

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ‌ ಕೋಗಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಹಿರಿಯಮ್ಮ (60) ಎಂಬವರು ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಮನೆ ಗೋಡೆ ಕುಸಿದುಬಿದ್ದ ಗಂಭೀರ ಗಾಯಗೊಂಡಿದ್ದ ವೃದ್ಧೆಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ. ರಾತ್ರಿ 10.30ರ ಸುಮಾರಿಗೆ ಅವರು ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ನಲ್ಲಿ ಮೃತಪಟ್ಟರು. ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ವೃದ್ಧೆಯೊಬ್ಬರೇ ಮಲಗಿದ್ದರು ಎಂದು ಹೇಳಲಾಗಿದೆ.

ಕುಸಿದ ಮನೆ ಮತ್ತು ಒಳಚಿತ್ರದಲ್ಲಿ ಮೃತ ಹಿರಿಯಮ್ಮ

ಅಥಣಿ ಬಳಿ ಗೋಡೆ ಕುಸಿದು ಯುವಕ ಸಾವು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಅಹೋರಾತ್ರಿ ಸುರಿದ ಮಳೆ ಹಿನ್ನೆಲೆಯಲ್ಲಿ ಮನೆಯ ಗೋಡೆ ಕುಸಿದು ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಅಥಣಿ ಪಟ್ಟಣದ ಅಗಸಿ ಹತ್ತಿರ ಮನೆ ಗೋಡೆ ಕುಸಿತ ಸಂಭವಿಸಿದ್ದು, ಕಾಶಿನಾಥ್ ಸುತಾರ (23) ಸಾವನ್ನಪ್ಪಿರುವ ಯುವಕ. ಮಳೆಯಿಂದಾಗಿ ಮನೆಯ ಗೋಡೆಗಳೆಲ್ಲ ನೆನೆದು ಕುಸಿತ ಸಂಭವಿಸಿದೆ ಎನ್ನಲಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವಕನನ್ನು ಕಳೆದುಕೊಂಡ ಕುಟುಂಬಿಕರ ಆಕ್ರಂದನ ಹೇಳತೀರದಾಗಿದೆ.

ಮನೆ ಗೋಡೆ ಕುಸಿದು ಮೃತಪಟ್ಟ ಕಾಶೀನಾಥ್‌

ಸ್ಟಡಿ ಮಾಡಿ ಮಲಗಿದ್ದ ಹುಡುಗಿ ಮೇಲೆ ಬಿತ್ತು ಮಣ್ಣು

ಬಾಗಲಕೋಟೆ: ಜಿಲ್ಲೆಯಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ ಪರಿಣಾಮವಾಗಿ ಅವಘಡಗಳೂ ಹೆಚ್ಚಾಗಿದೆ. ಈ ರೀತಿ ಅವಘಡದಲ್ಲಿ ಚಾವಣಿಯ ಮಣ್ಣು ಕುಸಿದುಬಿದ್ದು ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.

ತೇರದಾಳದ ಹಿರೇಮಠ ಗಲ್ಲಿಯಲ್ಲಿ ನಸುಕಿನ ಜಾವ ಘಟನೆ ನಡೆದಿದೆ, ಇಲ್ಲಿನ ದುಂಡಯ್ಯ ಮಠಪತಿ ಕುಟುಂಬ ವಾಸಿಸುತ್ತಿದ್ದ ಮನೆಯಲ್ಲಿ ಚಾವಣಿ ಕುಸಿದುಬಿದ್ದು, ಅಶ್ವಿನಿ ಮಠಪತಿ (15) ಎಂಬ ಬಾಲಕಿ ಮಣ್ಣಿನ ಅಡಿ ಸಿಲುಕಿದ್ದಳು. ಕೂಡಲೇ ಸ್ಥಳೀಯರ ಸಹಾಯದಿಂದ ಬಾಲಕಿಯ ರಕ್ಷಣೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ದುಂಡಯ್ಯ ಕುಟುಂಬ ಪರಯ್ಯ ಗಣಾಚಾರಿ ಎಂಬುವರ ಮನೆಯಲ್ಲಿ ಒಂದು ತಿಂಗಳಿಂದ ಬಾಡಿಗೆ ಇತ್ತು. ಮನೆಯಲ್ಲಿ ಐವರು ವಾಸ ಮಾಡುತ್ತಿದ್ದರು. ಬಾಲಕಿ ಆಶ್ವಿನಿ ರಾತ್ರಿ 1 ಗಂಟೆವರೆಗ ಓದಿ ಬಳಿಕ ನಿದ್ರೆಗೆ ಜಾರಿದ್ದಳು.

ನಸುಕಿನ ವೇಳೆ ಬಾಲಕಿ ಒಳ್ಳೆಯ ನಿದ್ರೆಯಲ್ಲಿದ್ದವ ವೇಳೆ ಚಾವಣಿಯಿಂದ ಸ್ವಲ್ಪ ಸ್ವಲ್ಪವೇ ಮಣ್ಣು ಬೀಳಲಾರಂಭಿಸಿದೆ. ಇದು ತಕ್ಷಣವೇ ದುಂಡಯ್ಯ ಅವರು ಎಲ್ಲರನ್ನೂ ಎಬ್ಬಿಸಿದರು. ಆದರೆ, ಅಶ್ವಿನಿಗೆ ತಕ್ಷಣಕ್ಕೆ ಎಚ್ಚರವಾಗಲಿಲ್ಲ. ಆಕೆಯ ಆಕೆಯ ಪಕ್ಕವೇ ಹೋಗಿ ಎಬ್ಬಿಸುವಷ್ಟರಲ್ಲಿ ಮಣ್ಣು ಕುಸಿದೇ ಬಿತ್ತು. ಕೂಡಲೇ ಆಕೆಯನ್ನು ಮಣ್ಣಿನಿಂದ ಹೊರಗೆಳೆದು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ತೇರದಾಳದಲ್ಲಿ ನಡೆದ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Weather Report : ಇನ್ನೈದು ದಿನ ನಿರಂತರ ಮಳೆ ಆರ್ಭಟ

Exit mobile version