ಕೊಡಗು/ಚಿಕ್ಕಮಗಳೂರು/ಮಂಡ್ಯ : ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ಮಳೆಯ ತೀವ್ರತೆ ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಬೃಹತ್ ಅರಳಿಮರ ರಸ್ತೆಗೆ ಉರುಳಿ ಬಿದ್ದಿದೆ. ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾವೇರಿ ನದಿಯ ಸಂಗಮ, ನದಿ ಪಾತ್ರದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ ಹೇರಲಾಗಿದೆ.
ಮಳೆಯ ಆರ್ಭಟಕ್ಕೆ ಉರುಳಿದ ಬೃಹತ್ ಅರಳಿಮರ
ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಬೃಹತ್ ಅರಳಿಮರ ರಸ್ತೆಗೆ ಉರುಳಿ ಬಿದ್ದಿದೆ. ಎರಡು ದಿನವಾದರೂ ಮರ ತೆರವುಗೊಳಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ನಾಗರಿಕರು ಆಕ್ರೋಶ ಹೊರ ಹಾಕಿದ್ದಾರೆ. ಮರ ಬಿದ್ದ ಪರಿಣಾಮ ಉದ್ದೇಬೋರನಹಳ್ಳಿ ಹಾಗೂ ಬಿಳೇಕಲ್ಲಹಳ್ಳಿ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ.
ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಮಂಡ್ಯ ಜಿಲ್ಲೆಯ ಕಾವೇರಿ ನದಿಯಲ್ಲಿ ಯುವಕ ಕೊಚ್ಚಿಹೋದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ. ಕಾವೇರಿ ನದಿಯ ಸಂಗಮ, ನದಿ ಪಾತ್ರದ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಸಂಗಮ ರಸ್ತೆಯ ಆರಂಭದಲ್ಲೇ ಬ್ಯಾರಿಕೇಡ್ ಅಳವಡಿಸಿ, ಪೊಲೀಸ್ ನಿಯೋಜನೆ ಮಾಡಲಾಗಿದೆ. ಪ್ರವಾಸಿಗರನ್ನು ಬ್ಯಾರಿಕೇಡ್ ಬಳಿಯೇ ತಡೆಯುತ್ತಿರುವ ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ |Rain News | ತುಂಗಭದ್ರಾ ಜಲಾಶಯದಿಂದ ನದಿಗೆ ನೀರು; ಮುಳುಗುವತ್ತ ಹಂಪಿ ಸ್ಮಾರಕಗಳು
ಬುಧವಾರ (ಜು.13) ಬೆಳಗ್ಗೆ ಕಾಲು ಜಾರಿ ಬಿದ್ದು ಯುವಕ ನದಿಯಲ್ಲಿ ಕೊಚ್ಚಿ ಹೋಗಿದ್ದ. ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್ (26) ಕುಟುಂಬಸ್ಥರು, ಸ್ನೇಹಿತರೊಂದಿಗೆ ಸಂಗಮಕ್ಕೆ ಬಂದಿದ್ದ ಎನ್ನಲಾಗಿದೆ. ಪೂಜೆಗೂ ಮುನ್ನ ನದಿಯಲ್ಲಿ ಕಾಲು ತೊಳೆಯುವ ವೇಳೆ ಕಾಲು ಜಾರಿ ಬಿದ್ದು ದುರ್ಘಟನೆ ಸಂಭವಿಸಿತ್ತು.
ಶಿಥಿಲ ಸೇತುವೆಗೆ ತಡೆಗೋಡೆ
ಶ್ರೀರಂಗಪಟ್ಟಣದಲ್ಲಿರುವ ವೆಲ್ಲೆಸ್ಲಿ ಸೇತುವೆ ಮೇಲೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಧಿಕ ಪ್ರಮಾಣದ ನೀರು ಹರಿವಿನಿಂದ ಶಿಥಿಲ ಸೇತುವೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸುವ ಮುನ್ನವೇ ಶ್ರೀರಂಗಪಟ್ಟಣ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ.
ನಾಪೋಕ್ಲು ಭಾಗಮಂಡಲ ರಸ್ತೆ ಸಂಪರ್ಕ ಖಡಿತ
ಕೊಡಗು ಜಿಲ್ಲೆಯ ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ನಾಪೋಕ್ಲು ಭಾಗಮಂಡಲ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಮೂರನೇ ಬಾರಿಗೆ ನಾಪೋಕ್ಲು ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಭಾರಿ ಗಾಳಿ ಮಳೆಗೆ ಮರಗಳು ಧರೆಗುರುಳುತ್ತಿವೆ. ಶ್ರೀಮತಿ ಡಿ. ಚೆನ್ನಮ ಕಾಲೇಜ್, ಗರಗಂದೂರಿನ ಶಾಲೆಗಳು ಹಾಗೂ ಸೋಮವಾರಪೇಟೆ ಸಂತಜೋಸೆಫರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಲಕಾವೇರಿಗೆ ತೆರಳುವ ವ್ಯೂ ಪಾಯಿಂಟ್ ಸಮೀಪ ಮರ ಬಿದ್ದಿದ್ದು, ಭಾಗಮಂಡಲ ತಲಕಾವೇರಿ ರಸ್ತೆ ಸಂಪೂರ್ಣ ಸ್ಥಗಿತಗೊಂಡಿದೆ.
ಶಿವಮೊಗ್ಗದಲ್ಲಿ ಮಳೆ ಮುಂದುವರಿದಿದ್ದು, ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಮಳೆ ವ್ಯಾಪಕವಾದ್ದರಿಂದ ರಜೆ ಘೋಷಣೆ ಮಾಡಲಾಗಿದೆ ಎಂದು ಶಿವಮೊಗ್ಗ ಡಿಡಿಪಿಐ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | Rain News | ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ: ಸುರಕ್ಷಿತ ಪ್ರದೇಶಕ್ಕೆ ಗರ್ಭಿಣಿಯರ ಶಿಫ್ಟ್