ರಾಮನಗರ: ರಾಜ್ಯಾದ್ಯಂತ ಮಳೆಯ (Rain News) ಆರ್ಭಟ ಜೋರಾಗಿದ್ದು, ಮಳೆ ರಗಳೆ ಜನರನ್ನು ಹೈರಾಣಾಗಿಸಿದೆ. ರಾಮನಗರದ ಸುತ್ತ ಮುತ್ತಲಿನ ಕೆರೆಗಳು ಉಕ್ಕಿ ಹರಿಯುತ್ತಿದ್ದು, ಕೆರೆ ಪಕ್ಕದ ಪ್ರದೇಶಗಳ ನಿವಾಸಿಗಳು ಆತಂಕದಲ್ಲಿ ಇರುವಂತಾಗಿದೆ. ಜತೆಗೆ ರೈತ ಜಮೀನುಗಳಿಗೂ ನೀರು ನುಗ್ಗಿದ್ದು ಬೆಳೆ ಎಲ್ಲವೂ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ರಾಮನಗರ ಒಂದರಲ್ಲಿಯೇ ಮಳೆಯ ಅನಾಹುತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.
ಸವಾರರು ಪಾರು- ಬೈಕ್ ನೀರುಪಾಲು
ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆರೆ ಬಳಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವ ವೇಳೆ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಬೈಕ್ ಸವಾರರನ್ನು ರಕ್ಷಣೆ ಮಾಡಲಾಗಿದೆ. ಹೊಂಗನೂರು ಕೆರೆಯು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದ್ದು, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬೈಕ್ ಸವಾರರನ್ನು ಪಾರು ಮಾಡಲಾಗಿದ್ದು, ಬೈಕ್ ನೀರುಪಾಲಾಗಿದೆ. ಪ್ರಾಣಾಪಾಯದಿಂದ ಪಾರಾದ ಸವಾರ ಸತೀಶ್ ಮಾತನಾಡಿ, ಸೇತುವೆ ನಿರ್ಮಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ನಾನು ಹುಟ್ಟಿದಾಗಿನಿಂದಲೂ ಈ ಪ್ರಮಾಣದ ನೀರು ನೋಡಿಲ್ಲ. ಹೊಂಗನೂರು ಕೆರೆ ಮಾರ್ಗದಿಂದ ಬೈಕ್ ಸವಾರರು ಬರದಂತೆ ಮನವಿ ಮಾಡಿದ್ದರು.
ನೀರಿನ ರಭಸಕ್ಕೆ ಸಿಲುಕಿದ ಲಾರಿ ಚಾಲಕ
ಹೊಂಗನೂರು ಕೆರೆ ಉಕ್ಕಿ ಹರಿಯುತ್ತಿದ್ದು, ರಸ್ತೆ ದಾಟಲು ಹೋಗಿ ಲಾರಿ ಚಾಲಕನೊಬ್ಬ ನೀರಿನ ರಭಸಕ್ಕೆ ಸಿಲುಕಿಕೊಂಡ ಘಟನೆ ನಡೆಯಿತು. ಹೊಂಗನೂರು ಕೆರೆ ಮಾರ್ಗವಾಗಿ ಯಾರೂ ಬರದಂತೆ ಸೂಚನೆ ನೀಡಲಾಗಿತ್ತು. ಆದರೂ ಅಪಾಯವನ್ನು ಲೆಕ್ಕಿಸದೇ ರಸ್ತೆ ದಾಟಲು ಹೋಗಿ ನೀರಿನ ರಭಸಕ್ಕೆ ಅಡ್ಡಲಾಗಿ ನಡುರಸ್ತೆಯಲ್ಲೇ ನಿಲ್ಲುವಂತಾಯಿತು. ಬಳಿಕ ಚನ್ನಪಟ್ಟಣದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜೆಸಿಬಿ ಸಹಾಯದಿಂದ ಲಾರಿಯನ್ನು ಹಾಗೂ ಚಾಲಕನನ್ನು ರಕ್ಷಣೆ ಮಾಡಲಾಯಿತು.
ಇತ್ತ ಹೊಂಗನಹಳ್ಳಿ ಮೊಗಳ್ಳಿ ಕೆರೆ ಕೋಡಿ ಒಡೆದ ಪರಿಣಾಮ ಹೊಂಗನೂರು ಗ್ರಾಮದ ಜನರು ಆತಂಕದಲ್ಲಿ ದಿನದೂಡುವಂತಾಗಿದೆ. ಕೆರೆ ನೀರು ರೈತರ ಜಮೀನುಗಳಿಗೆ ನುಗ್ಗಿ ನೂರಾರು ಎಕರೆ ಬೆಳೆ ನಾಶವಾಗಿದೆ. ಕೆರೆ ಭಾಗದ ಜನರಿಗೆ ಸುರಕ್ಷಿತ ಜಾಗದಲ್ಲಿರುವಂತೆ ಚನ್ನಪಟ್ಟಣ ತಾಲೂಕು ಆಡಳಿತವು ಸುತ್ತೋಲೆ ಹೊರಡಿಸಿದೆ. ಮತ್ತೊಂದು ಕಡೆ ರಾತ್ರಿಯಿಡಿ ಸುರಿದ ಮಳೆಗೆ ಅರ್ಕಾವತಿ ನದಿ ಭೋರ್ಗರೆದಿದ್ದು, ಅರ್ಕೇಶ್ವರ ಕಾಲೋನಿಗೆ ನೀರು ನುಗ್ಗಿದೆ. ಕಳೆದ ಬಾರಿಯು ಭಕ್ಷಿ ಕೆರೆ ಕೋಡಿ ಒಡೆದು ಕಾಲೊನಿ ಸಂಪೂರ್ಣ ಜಲಾವೃತಗೊಂಡಿತ್ತು. ಈಗ ಅರ್ಕಾವತಿ ಹಾಗೂ ಭಕ್ಷಿ ಕೆರೆಗಳ ನೀರು ಒಮ್ಮೆಲೇ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಪಡಿತರ, ಮನೆ ಸಾಮಗ್ರಿಗಳು ನೀರುಪಾಲಾಗಿದೆ. ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದ್ದು, ಪ್ರತಿ ಬಾರಿಯೂ ಇದೇ ಪರಿಸ್ಥಿತಿ ಇದ್ದು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ನೀರಿನಲ್ಲಿ ಮುಳುಗಿದ ಸರ್ಕಾರಿ ಶಾಲೆ
ಚನ್ನಪಟ್ಟಣದ ನೀಲಸಂದ್ರ ಗ್ರಾಮದಲ್ಲಿನ ಸರ್ಕಾರಿ ಶಾಲೆ ಸಂಪೂರ್ಣ ಮುಳುಗಡೆಯಾಗಿದೆ. ಭಾನುವಾರ ಆದ ಕಾರಣ ಶಾಲೆಗೆ ರಜೆ ಇದ್ದು, ಇದೇ ಪರಿಸ್ಥಿತಿ ಸೋಮವಾರವೂ ಮುಂದುವರಿದರೆ ಮಕ್ಕಳು ಶಾಲೆಗೆ ಬರುವುದು ಕಷ್ಟವಾಗಲಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Rain News | ಸೇತುವೆ ದಾಟಲು ಹೋಗಿ ಇಬ್ಬರು ನೀರುಪಾಲು; ಶೋಧಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ