ಶಿವಮೊಗ್ಗ/ ಮಡಿಕೇರಿ: ಶಿವಮೊಗ್ಗದಿಂದ ಕರಾವಳಿಯನ್ನು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವ್ಯಾಪಕ ಮಳೆಯಾಗಿದ್ದು, ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದ ಘಾಟಿ ರಸ್ತೆ ಸಂಚಾರ ಕೆಲಕಾಲ ಬಂದ್ ಆಗಿತ್ತು.
ಶಿವಮೊಗ್ಗದ ಗಡಿಗೆ ಹೊಂದಿಕೊಂಡಿರುವ 10ನೇ ತಿರುವಿನಲ್ಲಿ ರಸ್ತೆಗೆ ಮಣ್ಣುಕುಸಿತವಾಗಿದೆ. ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಯಿತು. ಘಾಟಿ ಕೆಳಗೆ ಸೋಮೇಶ್ವರ ಚೆಕ್ಪೋಸ್ಟ್ ಬಳಿಯಲ್ಲಿ ಹಾಗೂ ಮೇಲ್ಭಾಗ ಆಗುಂಬೆ ಘಾಟಿ ಚೆಕ್ಪೋಸ್ಟ್ ಬಳಿ ವಾಹನಗಳನ್ನು ತಡೆದು ವಾಪಸ್ ಕಳಿಸಲಾಯಿತು. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ರಸ್ತೆ ತೆರವಿಗೆ ಕ್ರಮ ಕೈಗೊಂಡರು.
ಬೆಳಗೆ 6 ಗಂಟೆಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸತತ ಪ್ರಯತ್ನದ ಬಳಿಕ ಮೂರು ಗಂಟೆಗಳ ಬಳಿಕ ರಸ್ತೆಯನ್ನು ಭಾಗಶಃ ತೆರವು ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೃಂಗೇರಿ ಉಪವಿಭಾಗದ ತಾಂತ್ರಿಕ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕುಸಿದ ಮಣ್ಣು ತೆರವು ಮಾಡುತ್ತಿದ್ದಾರೆ.
ಸಂಪಾಜೆ ಘಾಟಿ ಭಾಗಶಃ ಬಂದ್
ಮಡಿಕೇರಿ: ಮಂಗಳೂರು- ಮಡಿಕೇರಿ ರಸ್ತೆಯ ಕೊಯನಾಡು ಬಳಿ ಕಿಂಡಿ ಅಣೆಕಟ್ಟಿನಿಂದ ಮನೆಗಳಿಗೆ ನೀರು ನುಗ್ಗಿದೆ. ನಾಲ್ಕು ಮನೆಗಳು ಜಲಾವೃತವಾಗಿವೆ.
ಪ್ರವಾಹದಲ್ಲಿ ತೇಲಿ ಬಂದ ಮರಗಳು ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ನಿಂತಿದ್ದು, ರಸ್ತೆ ಹಾಗೂ ಮನೆಗಳತ್ತ ನೀರು ನುಗ್ಗಿದೆ. ಪ್ರವಾಹಕ್ಕೆ ನಾಲ್ಕು ಮನೆಗಳು ಸಿಲುಕಿವೆ. ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ- 275 ಸಮೀಪದಲ್ಲೇ ಪಯಸ್ವಿನಿ ನದಿಯ ಪ್ರವಾಹ ಹರಿಯುತ್ತಿದ್ದು, ರಸ್ತೆ ಮುಳುಗಡೆ ಭೀತಿ ತಲೆದೋರಿದೆ.