ಹುಬ್ಬಳ್ಳಿ: ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹುಬ್ಬಳ್ಳಿ ಪರಿಸರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಇಂಗಳಹಳ್ಳಿ ಗ್ರಾಮದ ಬೆಣ್ಣೆ ಹಳ್ಳ ಒಮ್ಮಿಂದೊಮ್ಮೆಗೇ ತುಂಬಿದ್ದರಿಂದ ಅದರ ಮಧ್ಯೆ ನಡುಗಡ್ಡೆಯಲ್ಲಿ ೨೫ಕ್ಕೂ ಅಧಿಕ ಮಂದಿ ಸಿಕ್ಕಿ ಹಾಕಿಕೊಂಡಿದ್ದರು. ಒಬ್ಬ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಏಕಾಏಕಿ ನೀರು ಏರಿದ್ದರಿಂದ ನಡುಗಡ್ಡೆಯಲ್ಲಿದ್ದ ೨೫ಕ್ಕೂ ಅಧಿಕ ಮಂದಿ ಅಪಾಯದಲ್ಲಿ ಸಿಲುಕಿದರು. ತಾಲೂಕು ಅಧಿಕಾರಿಗಳು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಗೋಕಾಕ್ ಮತ್ತು ತಹಶೀಲ್ದಾರ ಪ್ರಕಾಶ ನಾಶಿ ಸ್ಥಳಕ್ಕೆ ದೌಡಾಯಿಸಿ ೨೪ ಮಂದಿಯನ್ನು ರಕ್ಷಿಸಿದರು. ಈ ನಡುವೆ, ಒಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಹಾವೇರಿಯಲ್ಲೂ ಮಳೆ ಹಾವಳಿ
ಹಾವೇರಿಯಲ್ಲೂ ಮಳೆ ಹಾವಳಿ ಜೋರಾಗಿದ್ದು, ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇಲ್ಲಿನ ಮನೆಗಳಿಗೆ ನೀರು ಹೊಕ್ಕ ಕಾರಣ ಸರ್ಕಾರಿ ಶಾಲೆ ಮೈದಾನದಲ್ಲಿ ಗಂಟು ಮೂಟೆ ಸಮೇತ ಸ್ಥಳಾಂತರಗೊಂಡಿದ್ದಾರೆ. ಇಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಜನರು ನಿದ್ದೆಗೆಟ್ಟು ಕಾಯಬೇಕಾದ ಸ್ಥಿತಿ ಬಂದಿದೆ.
ಅಧಿಕಾರಿಗಳು ಶಾಲಾ ಮೈದಾನಕ್ಕೆ ಭೇಟಿ ನೀಡಿದ್ದು, ಊಟ ಮತ್ತು ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ| Rain news | ಬೆಂಗಳೂರು- ಮೈಸೂರು ಹೆದ್ದಾರಿ ಅಂಡರ್‌ಪಾಸ್‌ನಲ್ಲಿ ಮುಳುಗಿದ ಬಸ್, ಕಾರುಗಳು