ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಹಲವಾರು ಪ್ರದೇಶಗಳು ಅಪಾಯಕ್ಕೆ ಸಿಲುಕಿವೆ. ನಿರಂತರ ಮಳೆಯಿಂದ ಕೆಲವು ಮನೆಗಳು ಕೂಡಾ ಕುಸಿದು ಬೀಳುವ ಹಂತ ತಲುಪಿವೆ. ಸೋಮವಾರ ರಾತ್ರಿ ನಗರದ ಬಡಾವಣೆಯೊಂದರಲ್ಲಿ ಮನೆ ಕುಸಿದು ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ಮಲವಗೊಪ್ಪದ ಇಂದಿರಾನಗರ ಬಡಾವಣೆಯಲ್ಲಿ ಮನೆ ಕುಸಿದಿದ್ದು, ಗೌರಮ್ಮ (೬೯) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಗೌರಮ್ಮ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರು ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮನೆ ಗೋಡೆ ಕುಸಿದು ಬಿದ್ದಿದೆ. ಕಲ್ಲು ಮತ್ತು ಮಣ್ಣು ನೇರವಾಗಿ ಅವರ ಮೇಲೇ ಬಿದ್ದಿದ್ದರಿಂದ ಅವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗ್ಗೆ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಡಕೆ ತೋಟಕ್ಕೆ ನೀರು
ಶಿವಮೊಗ್ಗದಲ್ಲಿ ಸುರಿಯುತ್ತಿರು ಭಾರಿ ಮಳೆಯಿಂದಾಗಿ ದಂಡೆಗಳು ಒಡೆದು ಅಡಕೆ ತೋಟಗಳಿಗೂ ನೀರು ನುಗ್ಗಿ ಅನಾಹುತ ಸಂಭವಿಸಿದೆ. ತೀರ್ಥಹಳ್ಳಿ ತಾಲೂಕಿನ ಹಿತ್ತಲಸರದಲ್ಲಿ ಹಳ್ಳದ ದಂಡೆ ಒಡೆದು ನೀರು ನುಗ್ಗಿ ತೋಟ ಹಾಗೂ ಗದ್ದೆಗಳಿಗೆ ಅಪಾರ ಹಾನಿಯಾಗಿದೆ.
ಈ ಹಿಂದೆ ಕೂಡ ಇದೇ ಹಳ್ಳದ ದಂಡೆ ಒಡೆದು ಹೋಗಿತ್ತು. ಆಗ ಗ್ರಾಮಸ್ಥರೇ ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ಹಳ್ಳದ ದಂಡೆಯನ್ನು ಕಟ್ಟಿದ್ದರು. ಮತ್ತೆ ಅದೇ ಹಳ್ಳದ ದಂಡೆ ಒಡೆದು ರೈತರ ಜಮೀನಿಗೆ ನೀರು ನುಗ್ಗಿದೆ. ಶಾಶ್ವತ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Rain News | ಮನೆ ಕುಸಿದು ಯುವಕ ಸಾವು, ಅಪ್ಪ-ಅಮ್ಮನನ್ನು ಬೇರೆಡೆ ಬಿಟ್ಟು ಬಂದು ಮನೆ ಪ್ರವೇಶಿಸಿದಾಗ ನಡೆಯಿತು ದುರಂತ